ಕ್ರಿಪ್‌ಶಾ–ಗೋಕುಲಂ ಫೈನಲ್‌ ಪೈಪೋಟಿ ಬೆಂಗಳೂರು: ಕ್ರಿಪ್‌ಶಾ ಎಫ್‌ಸಿ ಮತ್ತು ಗೋಕುಲಂ ಎಫ್‌ಸಿ ಕೇರಳ ತಂಡಗಳು ರಾಷ್ಟ್ರೀಯ ಮಹಿಳಾ ಫುಟ್‌ಬಾಲ್‌ ಲೀಗ್‌ನ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಈ ಪಂದ್ಯ ನಡೆಯಲಿದೆ. ಸೋಮವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಕ್ರಿಪ್‌ಶಾ ಎಫ್‌ಸಿ 3–1 ಗೋಲುಗಳಿಂದ ಕೆಂಕ್ರೆ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು. ಕ್ರಿಪ್‌ಶಾ ತಂಡದ ರತನ್‌ಬಾಲಾ ದೇವಿ 18 ಮತ್ತು 38ನೇ ನಿಮಿಷಗಳಲ್ಲಿ ಗೋಲು ಬಾರಿಸಿ ತಂಡಕ್ಕೆ 2–0 ಮುನ್ನಡೆ ತಂದುಕೊಟ್ಟರು. 43ನೇ ನಿಮಿಷದಲ್ಲಿ ಜ್ಯೋತಿ, ಚೆಂಡನ್ನು ಗುರಿ ಸೇರಿಸಿದ್ದರಿಂದ ಕೆಂಕ್ರೆ ತಂಡದ ಹಿನ್ನಡೆ 1–2ಕ್ಕೆ ತಗ್ಗಿತು. ದ್ವಿತೀಯಾರ್ಧದಲ್ಲಿ ಕ್ರಿಪ್‌ಶಾ ತಂಡ ಇನ್ನಷ್ಟು ಪರಿಣಾಮಕಾರಿಯಾಗಿ ಆಡಿತು. ಅಸೆಮ್‌ ರೋಜಾ ದೇವಿ 62ನೇ ನಿಮಿಷದಲ್ಲಿ ಕಾಲ್ಚಳಕ ತೋರಿ ತಂಡದ ಸಂಭ್ರಮಕ್ಕೆ ಕಾರಣರಾದರು. ನಾಲ್ಕರ ಘಟ್ಟದ ಮತ್ತೊಂದು ಪೈಪೋಟಿಯಲ್ಲಿ ಗೋಕುಲಂ ಎಫ್‌ಸಿ 3–0 ಗೋಲುಗಳಿಂದ ಹಾಲಿ ಚಾಂಪಿಯನ್‌ ಸೇತು ಎಫ್‌ಸಿಗೆ ಆಘಾತ ನೀಡಿತು. ಗೋಕುಲಂ ತಂಡದ ಮನೀಷಾ 21ನೇ ನಿಮಿಷದಲ್ಲಿ ಗೋಲು ಗಳಿಸಿ ಗಮನ ಸೆಳೆದರು. ಬಳಿಕ ಸಬಿತ್ರಾ ಭಂಡಾರಿ ಮೋಡಿ ಮಾಡಿದರು. ಅವರು 44 ಮತ್ತು 84ನೇ ನಿಮಿಷಗಳಲ್ಲಿ ಗೋಲು ದಾಖಲಿಸಿ ತಂಡಕ್ಕೆ ಗೆಲುವಿನ ಸಿಹಿ ಉಣಬಡಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.