ಕೋವಿಡ್‌-19 | ಉಸಿರಾಡಲೂ ಪರದಾಡಿದ್ದೆ ಎಂದ 'ಪಾಲೊ ಡಿಬಾಲಾ' ಮಿಲಾನ್‌: ‘ಕೋವಿಡ್‌ ಮಹಾಮಾರಿ ತಗುಲಿದ ಬಳಿಕ ಉಸಿರಾಡಲೂ ಪರದಾಡುವಂತಾಗಿತ್ತು’ ಎಂದು ಯುವೆಂಟಸ್‌ ಫುಟ್‌ಬಾಲ್‌ ಕ್ಲಬ್‌ ತಂಡದ ಆಟಗಾರ ಪಾಲೊ ಡಿಬಾಲಾ ತಿಳಿಸಿದ್ದಾರೆ. ‘ಕೊರೊನಾ ಸೋಂಕು ತಗುಲಿದ ಆರಂಭದಲ್ಲಿ ಐದು ನಿಮಿಷ ನಡೆದಾಡುವುದಕ್ಕೂ ಆಗುತ್ತಿರಲಿಲ್ಲ. ಉಸಿರಾಟದ ಸಮಸ್ಯೆ ತೀವ್ರವಾಗಿ ಭಾದಿಸಿತ್ತು. ಈಗ ಕ್ಷೇಮವಾಗಿದ್ದೇನೆ’ ಎಂದು ಅರ್ಜೆಂಟೀನಾದ 26 ವರ್ಷ ವಯಸ್ಸಿನ ಆಟಗಾರ ಶನಿವಾರ ಹೇಳಿದ್ದಾರೆ. ‘ಕೋವಿಡ್‌ನಿಂದ ನಿಧಾನವಾಗಿ ಗುಣಮುಖನಾಗುತ್ತಿದ್ದೇನೆ. ಅಭ್ಯಾಸ ನಡೆಸಲೂ ಪ್ರಯತ್ನಿಸುತ್ತಿದ್ದೇನೆ. ಈಗ ಮೊದಲಿನಷ್ಟು ದಣಿವಾಗುತ್ತಿಲ್ಲ. ಮೈ ಕೈ ನೋವು ಕೂಡ ಮಾಯವಾಗಿದೆ’ ಎಂದಿದ್ದಾರೆ. ‘ನನ್ನ ಭಾವಿ ಪತ್ನಿ ಒರಿಯಾನ ಸಬಾಟಿನಿಗೂ ಸೋಂಕು ತಗುಲಿತ್ತು. ಆಕೆಯೂ ಈಗ ಚೇತರಿಸಿಕೊಂಡಿದ್ದಾಳೆ. ಖಾಲಿ ಕ್ರೀಡಾಂಗಣದಲ್ಲಿ ನಡೆದ ಇಂಟರ್‌ ಮಿಲಾನ್‌ ವಿರುದ್ಧದ ಸೀರಿ ‘ಎ’ ಪಂದ್ಯದಲ್ಲಿ ಗೋಲು ಗಳಿಸಿದ್ದ ಕ್ಷಣ ಎಂದಿಗೂ ಮರೆಯಲಾರದಂತಹದ್ದು’ ಎಂದೂ ತಿಳಿಸಿದ್ದಾರೆ. ಡಿಬಾಲಾ ಅವರು ಈ ಋತುವಿನಲ್ಲಿ ಒಟ್ಟು 13 ಗೋಲುಗಳನ್ನು ಬಾರಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.