ನಿಗದಿತ ಸಮಯದಲ್ಲೇ ವಿಶ್ವಕಪ್‌: ಎಐಎಫ್‌ಎಫ್‌ ವಿಶ್ವಾಸ ನವದೆಹಲಿ: ‘ಫಿಫಾ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿ ನಿಗದಿತ ವೇಳಾಪಟ್ಟಿಯ ಪ್ರಕಾರವೇ ನಡೆಯಲಿದೆ’ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ವಿಶ್ವಾಸ ವ್ಯಕ್ತಪಡಿಸಿದೆ. ‘ಈ ವರ್ಷದ ನವೆಂಬರ್‌ನಲ್ಲಿ ಟೂರ್ನಿ ನಡೆಸಲು ತೀರ್ಮಾನಿಸಲಾಗಿದೆ. ಅಷ್ಟರೊಳಗೆ ಕೊರೊನಾ ಬಿಕ್ಕಟ್ಟು ಬಗೆಹರಿಯುವ ಸಾಧ್ಯತೆ ಇದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಏನು ಮಾಡಬೇಕು ಎಂಬುದರ ಕುರಿತು ಫಿಫಾ, ಸೂಕ್ತ ತೀರ್ಮಾನ ಕೈಗೊಳ್ಳಲಿದೆ’ ಎಂದು ಎಐಎಫ್‌ಎಫ್‌ ಮಹಾ ಕಾರ್ಯದರ್ಶಿ ಕುಶಾಲ್‌ ದಾಸ್‌ ತಿಳಿಸಿದ್ದಾರೆ. ನವೆಂಬರ್‌ 2ರಿಂದ 21ರವರೆಗೆ ನಿಗದಿಯಾಗಿರುವ ಟೂರ್ನಿಯ ಪಂದ್ಯಗಳು ನವಿ ಮುಂಬೈ, ಕೋಲ್ಕತ್ತ, ಅಹಮದಾಬಾದ್‌, ಭುವನೇಶ್ವರ ಹಾಗೂ ಗುವಾಹಟಿಯಲ್ಲಿ ನಡೆಯಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.