ಪೋರ್ಚುಗಲ್‌ಗೆ ಮೊರೊಕ್ಕೊ ತಂಡದ ಸವಾಲು ದೋಹಾ (ರಾಯಿಟರ್ಸ್‌): ಐತಿಹಾಸಿಕ ಸಾಧನೆಯ ಹಂಬಲದಲ್ಲಿರುವ ಮೊರೊಕ್ಕೊ ತಂಡ, ಫಿಫಾ ವಿಶ್ವಕಪ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಶನಿವಾರ ಪೋರ್ಚುಗಲ್‌ ವಿರುದ್ಧ ಪೈಪೋಟಿ ನಡೆಸಲಿದೆ. ಟೂರ್ನಿಯಲ್ಲಿ ಈಗಾಗಲೇ ಅಚ್ಚರಿಯ ಫಲಿತಾಂಶದಿಂದ ಸದ್ದು ಮಾಡಿರುವ ಮೊರೊಕ್ಕೊ, ಅಲ್‌ ತುಮಾಮಾ ಕ್ರೀಡಾಂಗಣದಲ್ಲಿ ಗೆಲುವಿನ ಓಟ ಮುಂದುವರಿಸುವ ಕನಸಿನಲ್ಲಿದೆ. ಆದರೆ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ವಿಟ್ಜರ್ಲೆಂಡ್‌ ತಂಡವನ್ನು 6–1 ರಿಂದ ಬಗ್ಗುಬಡಿದಿದ್ದ ಪೋರ್ಚುಗಲ್‌ ತಂಡ ಮೊರೊಕ್ಕೊಗೆ ತಡೆಯೊಡ್ಡಲು ಸಜ್ಜಾಗಿದೆ. 36 ವರ್ಷಗಳ ಹಿಂದೆ ಮೆಕ್ಸಿಕೊದಲ್ಲಿ ನಡೆದಿದ್ದ ಟೂರ್ನಿಯಲ್ಲಿ 16ರ ಘಟ್ಟ ಪ್ರವೇಶಿಸಿದ್ದ ಮೊರೊಕ್ಕೊ ಈ ಸಾಧನೆ ಮಾಡಿದ ಆಫ್ರಿಕಾದ ಮೊದಲ ದೇಶ ಎಂಬ ಗೌರವ ಪಡೆದುಕೊಂಡಿತ್ತು. ಇದೀಗ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸುವ ಆಫ್ರಿಕಾ ಮತ್ತು ಅರಬ್‌ ನಾಡಿನ ಮೊದಲ ತಂಡ ಎಂಬ ಐತಿಹಾಸಿಕ ಸಾಧನೆ ಮಾಡುವ ವಿಶ್ವಾಸದಲ್ಲಿದೆ. ಸ್ವಿಟ್ಜರ್ಲೆಂಡ್‌ ವಿರುದ್ಧ ಹ್ಯಾಟ್ರಿಕ್‌ ಸಾಧಿಸಿದ್ದ ಪೋರ್ಚುಗಲ್‌ನ ಗೊನ್ಸಾಲೊ ರಾಮೋಸ್‌ ಮೇಲೆ ಎಲ್ಲರ ಚಿತ್ತನೆಟ್ಟಿದೆ. ಕೋಚ್‌ ಫೆರ್ನಾಂಡೊ ಸಾಂಟೋಸ್‌ ಈ ಪಂದ್ಯದಲ್ಲೂ ರೊನಾಲ್ಡೊ ಜಾಗದಲ್ಲಿ ರಾಮೋಸ್‌ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯೇ ಅಧಿಕ. ಜಾವೊ ಫೆಲಿಕ್ಸ್‌ ಮತ್ತು ಬ್ರೂನೊ ಫೆರ್ನಾಂಡಿಸ್‌ ಅವರೂ ಉತ್ತಮ ಲಯದಲ್ಲಿ ಆಡುತ್ತಿದ್ದಾರೆ. * ಮೊರೊಕ್ಕೊ ತಂಡವು ವಿಶ್ವಕಪ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಅರಬ್‌ ನಾಡಿದ ಮೊದಲ ಹಾಗೂ ಆಫ್ರಿಕಾದ ನಾಲ್ಕನೇ ದೇಶ ಎನಿಸಿಕೊಂಡಿದೆ. * ಮೊರೊಕ್ಕೊ ಈ ಟೂರ್ನಿಯಲ್ಲಿ ಎದುರಾಳಿ ತಂಡದ ಆಟಗಾರನಿಗೆ ಒಂದೂ ಗೋಲು ಬಿಟ್ಟುಕೊಟ್ಟಿಲ್ಲ. ಕೆನಡಾ ವಿರುದ್ಧ 2–1ರಲ್ಲಿ ಗೆದ್ದ ಪಂದ್ಯದಲ್ಲಿ ಡಿಫೆಂಡರ್‌ ನಯೇಫ್‌ ಅವರು ಎದುರಾಳಿಗಳಿಗೆ ‘ಉಡುಗೊರೆ’ ಗೋಲು ನೀಡಿದ್ದರು. * ಪೋರ್ಚುಗಲ್‌ ತಂಡದ ಪೆಪೆ (39 ವರ್ಷ 283 ದಿನ) ಅವರು ವಿಶ್ವಕಪ್‌ ಟೂರ್ನಿಯ ನಾಕೌಟ್‌ ಹಂತದಲ್ಲಿ ಗೋಲು ಗಳಿಸಿದ ಅತಿಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.