ಸಾಂಬಾ ನಾಡಿನಲ್ಲಿ ಫುಟ್‌ಬಾಲ್‌ ಸಂಭ್ರಮ ರಿಯೊ ಡಿ ಜನೈರೊ: ಕೋವಿಡ್‌ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ ಫುಟ್‌ಬಾಲ್ ಚಟುವಟಿಕೆಗಳು ಗರಿಗೆದರಿವೆ. ಮೂರು ತಿಂಗಳ ಬಳಿಕ ನಡೆದ ರಿಯೊ ಡಿ ಜನೈರೊ ರಾಜ್ಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಹಣಾಹಣಿಯಲ್ಲಿ ಫ್ಲೆಮಿಂಗೊ ತಂಡವು 3–0 ಗೋಲುಗಳಿಂದ ಬಾಂಗು ತಂಡವನ್ನು ಪರಾಭವಗೊಳಿಸಿತು. ಪ್ರತಿಷ್ಠಿತ ಮರಕಾನಾ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಿತ್ತು. ಕೊರೊನಾ ಸೋಂಕು ಹರಡುವ ಅಪಾಯವಿರುವುದರಿಂದ ಮೈದಾನಕ್ಕೆ ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಮಾಧ್ಯಮದವರು ಹಾಗೂ ಪಂದ್ಯದ ಅಧಿಕಾರಿಗಳಿಗೆ ಮಾತ್ರ ಕ್ರೀಡಾಂಗಣದೊಳಗೆ ಬಿಡಲಾಗಿತ್ತು. ಗುರುವಾರ ಒಂದೇ ದಿನ ಸಾಂಬಾ ನಾಡಿನಲ್ಲಿ ಒಟ್ಟು 1,238 ಮಂದಿ ಕೋವಿಡ್‌–19ಗೆ ಬಲಿಯಾಗಿರುವುದು ವರದಿಯಾಗಿದೆ. ಇದರೊಂದಿಗೆ ಕೋವಿಡ್‌ನಿಂದ ಸತ್ತವರ ಒಟ್ಟು ಸಂಖ್ಯೆಯು 47,869ಕ್ಕೆ ಏರಿಕೆಯಾಗಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಫುಟ್‌ಬಾಲ್‌ ಪುನರಾರಂಭಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವಬೊಟಾಫೊಗೊ ಹಾಗೂ ಫ್ಲುಮಿನೆನ್ಸ್‌ ಕ್ಲಬ್‌ಗಳು,ಈ ವಾರಾಂತ್ಯದಲ್ಲಿ ನಡೆಯುವ ಪಂದ್ಯಗಳಿಂದ ಹಿಂದೆ ಸರಿಯುವುದಾಗಿ ಹೇಳಿವೆ. ಬಾಂಗು ವಿರುದ್ಧದ ಪಂದ್ಯದಲ್ಲಿ ಫ್ಲೆಮಿಂಗೊ ತಂಡದ ಜಿಯಾರ್ಜಿಯನ್‌ ಡಿ ಅರಾಸ್‌ಕಯೆಟಾ (17ನೇ ನಿಮಿಷ), ಬ್ರುನೊ ಹೆನ್ರಿಕ್‌ (20) ಮತ್ತು ಪೆಡ್ರೊ ರೋಚಾ ಅವರು ಗೋಲು ಬಾರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.