ಐಎಸ್‌ಎಲ್ ಫುಟ್‌ಬಾಲ್‌: ಚೆಟ್ರಿ ಬಳಗಕ್ಕೆ ಬ್ಲಾಸ್ಟರ್ಸ್‌ ಸವಾಲು ಬೆಂಗಳೂರು: ಗೆಲುವಿನ ಹುಡುಕಾಟದಲ್ಲಿರುವ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಭಾನುವಾರ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಮುಖಾಮುಖಿಯಾಗಲಿದೆ. ಕೊಚ್ಚಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಣ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಎಂಟು ಪಂದ್ಯಗಳನ್ನು ಆಡಿರುವ ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿ ಏಳು ಪಾಯಿಂಟ್ಸ್ ಗಳಿಸಿ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಆಡಿದ ಕಳೆದ ಪಂದ್ಯದಲ್ಲಿ ತಂಡವು ಎಟಿಕೆ ಮೋಹನ್ ಬಾಗನ್ ಎದುರು ಎಡವಿತ್ತು. ಕೇರಳ ಬ್ಲಾಸ್ಟರ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ‘ಕೇರಳ ಬ್ಲಾಸ್ಟರ್ಸ್‌ ತಂಡದ ಸವಾಲಿಗೆ ಸಜ್ಜಾಗಿದ್ದೇವೆ. ಈ ಪಂದ್ಯದ ಮೂಲಕ ಗೆಲುವಿನ ಲಯಕ್ಕೆ ಮರಳುವೆವು‘ ಎಂದು ಬಿಎಫ್‌ಸಿ ಮುಖ್ಯ ಕೋಚ್‌ ಸೈಮನ್ ಗ್ರೇಸನ್ ಹೇಳಿದ್ದಾರೆ. ಪಂದ್ಯ ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್, ಜಿಯೊ ಟಿವಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.