ಫುಟ್‌ಬಾಲ್‌| ಭಾರತ ತಂಡದ ಗುಂಪು ಹಂತದ ಪಂದ್ಯಗಳು ಗುವಾಹಟಿಯಲ್ಲಿ ನವದೆಹಲಿ: 17 ವರ್ಷದೊಳಗಿನವರ ಮಹಿಳಾ ಫುಟ್‌ಬಾಲ್‌ ವಿಶ್ವಕಪ್‌ನ ಗುಂಪು ಹಂತದ ಎಲ್ಲ ಪಂದ್ಯಗಳನ್ನೂ ಭಾರತ ತಂಡ ಗುವಾಹಟಿಯಲ್ಲಿ ಆಡಲಿದೆ. ಅಲ್ಲಿಯ ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಮುಂದಿನ ವರ್ಷದ ಫೆಬ್ರುವರಿ 17ರಿಂದ ಮಾರ್ಚ್‌ 7ರವರೆಗೆ ನಡೆಯುವಟೂರ್ನಿಯ ಪರಿಷ್ಕೃತ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಫುಟ್‌ಬಾಲ್‌ ಫೆಡರೇಷನ್‌ (ಫಿಫಾ) ಮಂಗಳವಾರ ಬಿಡುಗಡೆ ಮಾಡಿದೆ. ಈ ಮೊದಲು ಕೂಟವು ಈ ವರ್ಷದ ನವೆಂಬರ್‌ನಲ್ಲಿ ನಿಗದಿಯಾಗಿತ್ತು. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಕ್ವಾರ್ಟರ್‌ಫೈನಲ್‌ ಪಂದ್ಯಗಳು ಫೆಬ್ರುವರಿ 27ರಿಂದ 28ರವರೆಗೆ ಕ್ರಮವಾಗಿ ಅಹ್ಮದಾಬಾದ್‌, ನವಿ, ಮುಂಬೈ, ಭುವನೇಶ್ವರ ಹಾಗೂ ಕೋಲ್ಕತ್ತದಲ್ಲಿ ನಿಗದಿಯಾಗಿವೆ. ನಾಲ್ಕರ ಘಟ್ಟದ ಎರಡೂ ಪಂದ್ಯಗಳು ಮಾರ್ಚ್‌ 3ರಂದು ನವಿ ಮುಂಬೈ ಹಾಗೂ ಭುವನೇಶ್ವರದಲ್ಲಿ ನಡೆಯಲಿವೆ. ಫೈನಲ್‌ ಪಂದ್ಯ ಮಾರ್ಚ್‌ 7ರಂದು ನವಿ ಮುಂಬೈನಲ್ಲಿ ನಡೆಯಲಿದೆ. ‘ಎ’ ಗುಂಪಿನಲ್ಲಿರುವಆತಿಥೇಯ ಭಾರತ ‘ಎ1’ ಸ್ಥಾನದಲ್ಲಿದ್ದು,ಫೆಬ್ರುವರಿ 17ರಂದು ನಡೆಯುವ ಮೊದಲ ಪಂದ್ಯದಲ್ಲಿ ‘ಎ2’ ತಂಡವನ್ನು ಎದುರಿಸಲಿದೆ. ಡ್ರಾ ಪ್ರಕಟವಾದ ಬಳಿಕ ಎದುರಾಳಿ ತಂಡ ಯಾವುದೆಂದು ಖಚಿತವಾಗಲಿದೆ. ಈ ಪಂದ್ಯ ಗುವಾಹಟಿಯಲ್ಲಿ ನಡೆಯಲಿದೆ. ‘ಎ’ ಗುಂಪಿನ ದಿನದ ಇನ್ನೊಂದು ಪಂದ್ಯವೂ ಗುವಾಹಟಿಯಲ್ಲೇ ನಡೆಯಲಿದೆ. ಅದೇ ದಿನ ‘ಬಿ’ ಗುಂಪಿನ ಪಂದ್ಯಗಳು ಭುವನೇಶ್ವರದಲ್ಲಿ ಆಯೋಜನೆಯಾಗಿವೆ. ಸಿ ಹಾಗೂ ಡಿ ಗುಂಪಿನ ಮೊದಲ ಪಂದ್ಯಗಳು ಫೆಬ್ರುವರಿ 18ರಂದು ಕ್ರಮವಾಗಿ ಕೋಲ್ಕತ್ತ ಹಾಗೂ ಅಹ್ಮದಾಬಾದ್‌ನಲ್ಲಿ ನಡೆಯಲಿವೆ. ಭಾರತ ಎರಡನೇ ಬಾರಿ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್‌ಗೆ ಆತಿಥ್ಯ ವಹಿಸಿದೆ. 2017ರ ಕೂಟ ಭಾರತದಲ್ಲಿ ನಡೆದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.