ಬಾಲ ಕಾರ್ಮಿಕರಿಗೆ ಭಾರತದ ಫುಟ್‌ಬಾಲ್‌ ಆಟಗಾರ್ತಿ ಬಾಲಾ ದೇವಿ ನೆರವು ನವದೆಹಲಿ: ಭಾರತ ಫುಟ್‌ಬಾಲ್‌ ತಂಡದ ಆಟಗಾರ್ತಿ ಬಾಲಾ ದೇವಿ ಕೋವಿಡ್‌–19 ಪಿಡುಗಿನಿಂದ ಸಂಕಷ್ಟಕ್ಕೆ ಸಿಲುಕಿರುವ ಬಾಲಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ. ಚಾರಿಟಿ ಸಂಸ್ಥೆಯೊಂದಿಗೆ ಸೇರಿ ನಿಧಿ ಸಂಗ್ರಹಿಸಲು ಅವರು ನಿರ್ಧರಿಸಿದ್ದಾರೆ. ‘ಚೈಲ್ಡ್‌ ರೈಟ್ಸ್‌ ಆ್ಯಂಡ್‌ ಯೂ (ಸಿಆರ್‌ವೈ)’ ಎಂಬ ಸರಕಾರೇತರ ಸಂಸ್ಥೆಯೊಂದಿಗೆ ಕೈಜೋಡಿಸಿರುವ ಬಾಲಾ ದೇವಿ, ಅಗತ್ಯವಿರುವ ಮಕ್ಕಳಿಗೆ ಮೂಲಭೂತ ಶಿಕ್ಷಣ ಸೌಲಭ್ಯಗಳನ್ನು ಒದಗಿಸಲು ನೆರವಾಗಲಿದ್ದಾರೆ. ‘ಬಾಲ ಕಾರ್ಮಿಕ ಸಮಸ್ಯೆ ನಮ್ಮಲ್ಲಿ ಸಾಮಾನ್ಯವಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಉದ್ಯೋಗ ನಷ್ಟ ಉಂಟಾಗುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಶಿಕ್ಷಣ ಪಡೆಯುವ ಅಥವವಾ ಆಟವಾಡುವ ಮಕ್ಕಳ ಕನಸುಗಳು ಕಮರಿಹೋಗಬಾರದು. ಪ್ರತಿ ಮಗುವಿನ ಆಸೆ ಈಡೇರಬೇಕು. ಈ ಕಾರಣಕ್ಕಾಗಿ ನಿಧಿ ಸಂಗ್ರಹ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದೇನೆ’ ಎಂದು ಬಾಲಾ ದೇವಿ ಹೇಳಿದ್ದಾರೆ. ‘ನಾನು ನಿಜ ಜೀವನದಲ್ಲಿ ಬಾಲ ದುಡಿಮೆಯ ಅನುಭವ ಪಡೆದಿಲ್ಲ. ಆದರೆ ದೇಶದಾದ್ಯಂತ ಈ ಪಿಡುಗು ಇದೆ’ ಎಂದು ಅವರು ನುಡಿದರು. ಭಾರತ ತಂಡದ ಪರ 50 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಬಾಲಾ ದೇವಿ ಆಡಿದ್ದಾರೆ. ಯುರೋಪ್‌ನ ವೃತ್ತಿಪರ ಲೀಗ್‌ನಲ್ಲಿ ಆಡಲು ಒಪ್ಪಂದಕ್ಕೆ ಸಹಿ ಹಾಕಿರುವ ಭಾರತದ ಮೊದಲ ಫುಟ್‌ಬಾಲ್‌ ಆಟಗಾರ್ತಿ ಅವರಾಗಿದ್ದಾರೆ. ಸ್ಕಾಟಿಷ್‌ ಪ್ರೀಮಿಯರ್‌ ಲೀಗ್‌ನ ರೇಂಜರ್ಸ್‌ ತಂಡದ ಪರ ಅವರು ಆಡುತ್ತಿದ್ದಾರೆ. ಆದರೆ ಸದ್ಯ ಈ ಲೀಗ್‌ ಕೋವಿಡ್‌ ಕಾರಣ ಮುಂದೂಡಿಕೆಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.