ಮ್ಯಾಡ್ರಿಡ್‌ಗೆ ಅಗ್ರ ಪಟ್ಟ ತಂದುಕೊಟ್ಟ ಸರ್ಜಿಯೊ ರಾಮೋಸ್ ಫ್ರೀ ಕಿಕ್ ಮ್ಯಾಡ್ರಿಡ್: ಮೋಹಕ ಫ್ರೀ ಕಿಕ್‌ನಲ್ಲಿ ಗೋಲು ಗಳಿಸಿಕೊಟ್ಟ ಸರ್ಜಿಯೊ ರಾಮೋಸ್ ಅವರು ರಿಯಲ್ ಮ್ಯಾಡ್ರಿಡ್ ತಂಡಕ್ಕೆ ಲಾಲಿಗಾ ಫುಟ್‌ಬಾಲ್ ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿಕೊಟ್ಟರು. ಬುಧವಾರ ರಾತ್ರಿ ನಡೆದ ರೋಮಾಂಚಕಾರಿ ಹೋರಾಟದಲ್ಲಿ ರಿಯಲ್ ಮಲೋರ್ಕಾ ವಿರುದ್ಧ ಮ್ಯಾಡ್ರಿಡ್ ಏಕಪಕ್ಷೀಯವಾದ ಎರಡು ಗೋಲುಗಳಿಂದ ಜಯ ಸಾಧಿಸಿತು. ಆಲ್ಫ್ರೆಡೊ ಡಿ ಸ್ಟೆಫಾನೊ ಕ್ರೀಡಾಂಗಣದಲ್ಲಿ ಮಿಂಚಿದ 19 ವರ್ಷದ ವಿನಿಷಿಯಸ್ ಜೂನಿಯರ್ ಮೊದಲಾರ್ಧದಲ್ಲಿ (19ನೇ ನಿಮಿಷ) ಗಳಿಸಿದ ಗೋಲಿನ ಮೂಲಕ ಮ್ಯಾಡ್ರಿಡ್ ಮುನ್ನಡೆ ಗಳಿಸಿತ್ತು. ಪಂದ್ಯ ಮುಕ್ತಾಯಕ್ಕೆ ನಾಲ್ಕು ನಿಮಿಷ ಬಾಕಿ ಇರುವಾಗ ರಾಮೋಸ್ ಜಾದೂ ತೋರಿದರು. ಈ ಗೆಲುವಿನೊಂದಿಗೆ ಹಾಲಿ ಚಾಂಪಿಯನ್ ಬಾರ್ಸಿಲೋನಾ ತಂಡ ಮತ್ತು ಮ್ಯಾಡ್ರಿಡ್ ತಂಡದ ಪಾಯಿಂಟ್‌ಗಳು ಸಮಾನವಾದವು. ಉಭಯತಂಡಗಳು ತಲಾ 31 ಪಂದ್ಯಗಳನ್ನು ಆಡಿದ್ದು 68 ಪಾಯಿಂಟ್‌ಗಳನ್ನು ಕಲೆ ಹಾಕಿವೆ. ಆದರೆ ಮುಖಾಮುಖಿ ಪಂದ್ಯಗಳಲ್ಲಿ ಹೆಚ್ಚು ಜಯ ಗಳಿಸಿರುವುದರಿಂದ ಮ್ಯಾಡ್ರಿಡ್ ಅಗ್ರ ಸ್ಥಾನ ಖಚಿತಪಡಿಸಿಕೊಂಡಿತು. ’ಕೊರೊನಾ ವೈರಾಣು ಹಾವಳಿಯಿಂದಾಗಿ ಈ ಬಾರಿ ನಮಗೆಲ್ಲ ಈ ಲೀಗ್‌ನಲ್ಲಿ ಮಾತ್ರ ಆಡುವ ಅವಕಾಶ ಇದೆ. ಆದ್ದರಿಂದ ಇದನ್ನು ಗೆಲ್ಲುವುದೊಂದೇ ನಮ್ಮ ಗುರಿ’ ಎಂದು ರಾಮೋಸ್ ಹೇಳಿದರು. ಬುಧವಾರ ಫ್ರೀ ಕಿಕ್ ಮೂಲಕ ಗಳಿಸಿದ ಗೋಲಿನ ಮೂಲಕ ರಾಮೋಸ್ ಈ ಋತುವಿನಲ್ಲಿ ಎಂಟು ಗೋಲು ಕಲೆ ಹಾಕಿದ ಸಾಧನೆ ಮಾಡಿದರು. ಭಾನುವಾರ ರಿಯಲ್ ಸೊಸಿಡಡ್ ಎದುರಿನ ಪಂದ್ಯದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದ ಅವರು ಲಾಲಿಗಾದಲ್ಲಿ ಅತಿಹೆಚ್ಚು ಗೋಲು ಗಳಿಸಿದ ಡಿಫೆಂಡರ್ ಎಂಬ ದಾಖಲೆ ಬರೆದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.