ಲಾಲಿಗಾದಲ್ಲಿ ಬಾಲಕ ಲೂಕಾ ರೊಮೆರೊ ಕಾಲ್ಚಳಕದ ದಾಖಲೆ ಮ್ಯಾಡ್ರಿಡ್: ದಿಗ್ಗಜ ಆಟಗಾರರ ನಡುವೆ ಕಾಲ್ಚಳಕದ ಪುಳಕ ನೀಡಿದ 15 ವರ್ಷದ ಲೂಕಾ ರೊಮೇರೊ ಬುಧವಾರ ರಾತ್ರಿಆಲ್ಫ್ರೆಡೊ ಡಿ ಸ್ಟೆಫಾನೊ ಕ್ರೀಡಾಂಗಣದಲ್ಲಿ ದಾಖಲೆ ಬರೆದರು. ಲಾಲಿಗಾ ಫುಟ್‌ಬಾಲ್ ಟೂರ್ನಿಯಲ್ಲಿ ಆಡಿದ ಅತಿ ಕಿರಿಯ ಆಟಗಾರ ಎಂಬ ಶ್ರೇಯಸ್ಸು ಅವರ ಮುಡಿಗೇರಿತು. ಮಲೋರ್ಕಾ ತಂಡದ ‘ಹಿರಿಯ’ ಆಟಗಾರರ ಜೊತೆ ಜೂನ್ ಒಂದರಂದು ಮೊದಲ ಬಾರಿ ಅಭ್ಯಾಸಕ್ಕೆ ಇಳಿದ ಮಿಡ್‌ಫೀಲ್ಡರ್ ಲೂಕಾ ಅವರು ರಿಯಲ್ ಮ್ಯಾಡ್ರಿಡ್ ಎದುರಿನ ಪಂದ್ಯದ 83ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಕಣಕ್ಕೆ ಇಳಿದರು. ಪಂದ್ಯದಲ್ಲಿ ಮಲೋರ್ಕಾ 0–2 ಗೋಲುಗಳಿಂದ ಸೋತಿತ್ತು. ಪಂದ್ಯದ ನಂತರ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಲೂಕಾ ‘ಇದು ಮರೆಯಲಾಗದ ದಿನ. ಈ ಅವಕಾಶ ಕಲ್ಪಿಸಿದ್ದಕ್ಕಾಗಿ ತಂಡದ ಎಲ್ಲರಿಗೂ ಧನ್ಯವಾದ ಸಲ್ಲಿಸಲೇಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಕಣಕ್ಕೆ ಇಳಿಸುವ ಮುನ್ನ ಆತನ ಎದೆಯ ಮೇಲೆ ಕೈಯಿಟ್ಟೆ. ಎದೆಬಡಿತ ಜೋರಾಗಿತ್ತು. ಅಂಥ ಸಂದರ್ಭದಲ್ಲಿ ಯಾವುದೇ ಆಟಗಾರನಿಗೆ ಅದು ಸಾಮಾನ್ಯ. ಉದ್ವೇಗಕ್ಕೆ ಒಳಗಾಗದೆ, ಸಹಜ ಶೈಲಿಯ ಆಟ ಆಡುವಂತೆ ಆತನಿಗೆ ಹೇಳಿದೆ. ಈ ಪಂದ್ಯದಲ್ಲಿ ಆಡಲು ಆತ ನಿಜವಾಗಿಯೂ ಅರ್ಹನಾಗಿದ್ದ’ ಎಂದು ಮಲೋರ್ಕಾ ತಂಡದ ಕೋಚ್ ವಿಸೆಂಟೆ ಮೊರೆನೊ ಹೇಳಿದ್ದಾರೆ. ಲೂಕಾ ಬುಧವಾರ ಮುರಿದದ್ದು 81 ವರ್ಷ ಹಿಂದಿನ ದಾಖಲೆ. 1939ರಲ್ಲಿ 15 ವರ್ಷ 255 ದಿನ ವಯಸ್ಸಿನ ಫ್ರಾನ್ಸಿಸ್ಕೊ ಬಾವೊ ರಾಡ್ರಿಗ್ಸ್‌ (ಸ್ಯಾನ್ಸನ್) ಸೆಲ್ಟಾ ವಿಗೊ ತಂಡದ ಪರ ಸೆವಿಲ್ಲಾ ವಿರುದ್ಧದ ಪಂದ್ಯದಲ್ಲಿ ಆಡಿದ್ದರು. ಲೂಕಾಗೆ ಬುಧವಾರ 15 ವರ್ಷ 219 ದಿನ ತುಂಬಿತ್ತು. ಲೂಕಾಜನಿಸಿದ್ದ ಮೆಕ್ಸಿಕೊದಲ್ಲಿ.ಸ್ಪೇನ್‌ನಲ್ಲಿ ಆಡಲು ಸಾಕಷ್ಟು ಅವಕಾಶವಿತ್ತು. ಆದರೆ ಪಾಲಕರು ಅರ್ಜೆಂಟೀನಾದವರಾದ್ದರಿಂದ ಆ ದೇಶದ ಪರವಾಗಿ 15 ವರ್ಷದೊಳಗಿನವರ ತಂಡದಲ್ಲಿ ಆಡುತ್ತಿದ್ದಾರೆ. ಎಡಗಾಲು ಆಟಗಾರನಾದ ಲೂಕಾ ಶೈಲಿಯು ಸ್ಪೇನ್‌ನ ಮಿಡ್‌ಫೀಲ್ಡರ್‌ ಡೇವಿಡ್ ಸಿಲ್ವಾ ಅವರನ್ನು ಹೋಲುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.