ಎಟಿಕೆ ತಂಡದೊಂದಿಗಿನ ರಾಯ್‌ ಕೃಷ್ಣ ಒಪ್ಪಂದ ವಿಸ್ತರಣೆ ನವದೆಹಲಿ : ಫಿಜಿ ಫುಟ್‌ಬಾಲ್‌ ಆಟಗಾರ ರಾಯ್‌ ಕೃಷ್ಣ ಅವರು ಎಟಿಕೆ ತಂಡದೊಂದಿಗಿನ ತಮ್ಮ ಒಪ್ಪಂದವನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಿಕೊಂಡಿದ್ದಾರೆ. ಮುಂಬರುವ ಏಳನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಟೂರ್ನಿಯಲ್ಲಿ ಅವರು ಎಟಿಕೆ‌ ಪರ ಕಣಕ್ಕಿಳಿಯಲಿದ್ದಾರೆ. ಹಾಲಿ ಚಾಂಪಿಯನ್‌ ಆಗಿರುವ ಎಟಿಕೆ ತಂಡವು, ಐ–ಲೀಗ್‌ ಟೂರ್ನಿಯ ವಿಜೇತ ಮೋಹನ್‌ ಬಾಗನ್‌ ಜೊತೆ ವಿಲೀನವಾಗಿದ್ದರಿಂದ ಮುಂಬರುವ ಐಎಸ್‌ಎಲ್‌ನಲ್ಲಿ ‘ಎಟಿಕೆ–ಬಾಗನ್‌’ ತಂಡವಾಗಿ ಕಣಕ್ಕಿಳಿಯಲಿದೆ. 2019-20ರ ಋತುವಿನ ಐಎಸ್‌ಎಲ್‌ ಟೂರ್ನಿಯಲ್ಲಿ ಎಟಿಕೆ ತಂಡ ಪ್ರಶಸ್ತಿ ಜಯಿಸುವಲ್ಲಿ ರಾಯ್ ‌ಕೃಷ್ಣ ಪಾತ್ರ ಪ್ರಮುಖವಾಗಿತ್ತು. ಅಮೋಘ 15 ಗೋಲು ದಾಖಲಿಸಿದ್ದ ಅವರು ತಂಡ ಮೂರನೇ ಬಾರಿ ಕಿರೀಟ ಧರಿಸುವಂತೆ ಮಾಡಿದ್ದರು. ‘ನನ್ನ ಕ್ಲಬ್‌ನೊಂದಿಗೆ ಒಪ್ಪಂದ ವಿಸ್ತರಿಸಿಕೊಂಡಿರುವುದಕ್ಕೆ ಖುಷಿಯಾಗಿದೆ. 2019–20ರ ಐಎಎಸ್‌ಎಲ್‌ ಟೂರ್ನಿಯಲ್ಲಿ ಎಟಿಕೆ ಚಾಂಪಿಯನ್‌ ಆಗಿದ್ದರಿಂದ ಅದರೊಂದಿಗೆ ಮುಂದುವರಿಯಲು ಬಯಸುವುದು ಸಹಜ’ ಎಂದು ಕೃಷ್ಣ ಹೇಳಿದ್ದಾರೆ. ಮೋಹನ್‌ ಬಾಗನ್‌ ಜೊತೆ ಎಟಿಕೆ ತಂಡ ವಿಲೀನವಾಗಿದ್ದಕ್ಕೆ ಕೃಷ್ಣ ಸಂತಸ ವ್ಯಕ್ತಪಡಿಸಿದ್ದಾರೆ. ‘ಭಾರತಕ್ಕೆ ಮರಳಿ, ಕೋಚ್‌ ಆ್ಯಂಟೊನಿಯೊ ಹಬಾಸ್‌ ಮಾರ್ಗದರ್ಶನದಲ್ಲಿ ತರಬೇತಿಗೆ ಮರಳಲು ಕಾತರನಾಗಿದ್ದೇನೆ; ಹಾಗೆಯೇ ತಂಡದ ಆಟಗಾರರನ್ನು ಕೂಡಿಕೊಳ್ಳಲೂ’ ಎಂದು ಕೃಷ್ಣ ನುಡಿದರು. ಕೋಲ್ಕತ್ತ ಮೂಲದ ಕೃಷ್ಣ ಅವರು ಫಿಜಿ ರಾಷ್ಟ್ರೀಯ ತಂಡದ ಪರ 40 ಪಂದ್ಯಗಳಲ್ಲಿ ಆಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.