ಹಿರಿಯ ಫುಟ್‌ಬಾಲ್‌ ಕೋಚ್‌ ಬಿಲಾರ್ಡೊಗೆ ಕೋವಿಡ್‌ ಸಾವೊ ಪಾಲೊ: 1986ರ ಫುಟ್‌ಬಾಲ್‌ ವಿಶ್ವಕಪ್‌ ಟೂರ್ನಿಯ ವೇಳೆ ಅರ್ಜೆಂಟೀನಾ ತಂಡಕ್ಕೆ ತರಬೇತಿ ನೀಡಿದ್ದ ಕಾರ್ಲೊಸ್‌ ಬಿಲಾರ್ಡೊ ಅವರಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದೆ. ಅವರ ಕುಟುಂಬದ ಮೂಲಗಳು ಶುಕ್ರವಾರ ಈ ವಿಷಯ ಬಹಿರಂಗಪಡಿಸಿವೆ. ‘ಬಿಲಾರ್ಡೊ ಅವರ ತಪಾಸಣೆ ನಡೆಸಲಾಗಿದ್ದು ಸೋಂಕು ಪತ್ತೆಯಾಗಿದೆ. ಆದರೆ ಅವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ; ಆರೋಗ್ಯವಾಗಿದ್ದಾರೆ’ ಎಂದು ಮೂಲಗಳು ತಿಳಿಸಿವೆ. 82 ವರ್ಷದ ಬಿಲಾರ್ಡೊ ಅವರು ಎಸ್ಟುಡಿಯಂಟಸ್‌ ಫುಟ್‌ಬಾಲ್‌ ಕ್ಲಬ್‌ನ ಆಟಗಾರ ಹಾಗೂ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ. 1968–70ರ ಅವಧಿಯಲ್ಲಿ ಈ ಕ್ಲಬ್‌ ಪರ ಆಡಿದ್ದ ಬಿಲಾರ್ಡೊ, ತಂಡವು ಮೂರು ಬಾರಿ ಕೋಪಾ ಲಿಬರ್ಟಾಡೋರ್ಸ್‌ ಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಡಿಗೊ ಮರಡೋನಾ ನೇತೃತ್ವದ ಅರ್ಜೆಂಟೀನಾ ತಂಡ 1986ರಲ್ಲಿ ಮೆಕ್ಸಿಕೊದಲ್ಲಿ ನಡೆದ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಪಟ್ಟ ಧರಿಸಿತ್ತು. ಈ ತಂಡಕ್ಕೆ ಬಿಲಾರ್ಡೊ ಮಾರ್ಗದರ್ಶನ ಇತ್ತು. 1990ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಬಿಲಾರ್ಡೊ ತರಬೇತಿಯಲ್ಲಿ ಪಳಗಿದ್ದ ತಂಡ ರನ್ನರ್‌ ಅಪ್‌ ಆಗಿತ್ತು. ಕೋವಿಡ್‌–19 ಪಿಡುಗಿನಿಂದ ಅರ್ಜೆಂಟೀನಾದಲ್ಲಿ 1,184 ಸಾವನ್ನಪ್ಪಿದ್ದಾರೆ ಎಂದು ಅಲ್ಲಿಯ ಆರೋಗ್ಯ ಸಚಿವಾಲಯದ ವರದಿ ಹೇಳಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.