ನವೆಂಬರ್‌ನಲ್ಲಿ ಐಲೀಗ್‌ಗೆ ಕೋಲ್ಕತ್ತ ಆತಿಥ್ಯ ನವದೆಹಲಿ: ಇಂಡಿಯನ್ ಸೂಪರ್ ಲೀಗ್ ಟೂರ್ನಿಯನ್ನು ಗೋವಾ ಅಥವಾ ಕೇರಳದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಐ ಲೀಗ್ ಫುಟ್‌ಬಾಲ್ ಟೂರ್ನಿಯನ್ನು ನವೆಂಬರ್‌ನಲ್ಲಿ ಕೋಲ್ಕತ್ತದಲ್ಲಿ ಆಯೋಜಿಸಲು ಎಐಎಫ್‌ಎಫ್‌ ಚಿತ್ತ ನೆಟ್ಟಿದೆ. ಮಂಗಳವಾರ ನಡೆದ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಲೀಗ್‌ ಸಮಿತಿಯ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು. ’ಐಎಸ್‌ಎಲ್ ಆಯೋಜಕರು ಕೇರಳ ಮತ್ತು ಗೋವಾದ ಸಂಸ್ಥೆಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಕೊರೊನಾ ವೈರಸ್‌ ದೇಶದೆಲ್ಲೆಡೆ ದಾಂಗುಡಿ ಇಟ್ಟಿದೆ. ಆದ್ದರಿಂದ ತಂಡಗಳ ಪ್ರಯಾಣವನ್ನು ಮೊಟಕುಗೊಳಿಸಲು ಒಂದೇ ರಾಜ್ಯದಲ್ಲಿ ಎಲ್ಲಪಂದ್ಯಗಳನ್ನೂ ನಡೆಸಲು ಉದ್ದೇಶಿಸಲಾಗಿದೆ‘ ಎಂದು ಎಐಎಫ್‌ಎಫ್‌ ಹಿರಿಯ ಉಪಾಧ್ಯಕ್ಷ ಸುಬ್ರತಾ ದತ್ತಾ ಹೇಳಿದರು. ’ಕೋಲ್ಕತ್ತದಲ್ಲಿ 2020–21ರ ಐ ಲೀಗ್ ಟೂರ್ನಿಯನ್ನು ಆಯೋಜಿಸಲು ಯೋಜಿಸಲಾಗಿದೆ. ರಾಜ್ಯ ಫುಟ್‌ಬಾಲ್ ಸಂಸ್ಥೆಯಿಂದ ಲಿಖಿತ ಸಮ್ಮತಿಗಾಗಿ ಕಾಯುತ್ತಿದ್ದೇವೆ‘ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.