ಹೈದರಾಬಾದ್‌ ಎಫ್‌ಸಿಗೆ ಆದಿಲ್‌ ಖಾನ್‌ ಸಾರಥ್ಯ ಬ್ಯಾಂಬೊಲಿಮ್‌: ಭಾರತ ರಾಷ್ಟ್ರೀಯ ಫುಟ್‌ಬಾಲ್‌ ತಂಡದ ಡಿಫೆಂಡರ್‌ ಆದಿಲ್‌ ಖಾನ್ ಅವರು ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಟೂರ್ನಿಯಲ್ಲಿ ಆಡುವ ಹೈದರಾಬಾದ್ ಎಫ್‌ಸಿ ತಂಡಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ. 2012ರಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದ 32 ವರ್ಷದ ಆದಿಲ್, ಇದುವರೆಗೆ 10 ಪಂದ್ಯಗಳನ್ನು ಆಡಿದ್ದಾರೆ. ಹೋದ ವರ್ಷ ನಡೆದ 2022ರ ವಿಶ್ವಕಪ್‌ ಅರ್ಹತಾ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಭಾರತ 1–1ರ ಡ್ರಾ ಸಾಧಿಸಿತ್ತು. ಕೋಲ್ಕತ್ತದಲ್ಲಿ ನಡೆದ ಈ ಹಣಾಹಣಿಯಲ್ಲಿ ಆದಿಲ್ ಖಾನ್‌ ಅವರು ಹೆಡರ್‌ ಮೂಲಕ ಗೋಲು ಗಳಿಸಿ ಪಂದ್ಯ ಸಮಬಲವಾಗುವಂತೆ ಮಾಡಿದ್ದರು. ‘ಆದಿಲ್‌ ಖಾನ್ ಅವರ ಅನುಪಸ್ಥಿತಿಯಲ್ಲಿ ಸುಬ್ರತಾ ಪಾಲ್‌, ಅರಿದನೆ ಸಂಟಾನ, ಜೋವಾ ವಿಕ್ಟರ್‌ ಅವರು ನಾಯಕತ್ವದ ಹೊಣೆ ನಿಭಾಯಿಸಲಿದ್ದಾರೆ‘ ಎಂದು ಹೈದರಾಬಾದ್‌ ಎಫ್‌ಸಿ ಕೋಚ್‌ ಮ್ಯಾನೊಲೊ ಮಾರ್ಕ್ವೆಜ್‌ ಹೇಳಿದ್ದಾರೆ. ‘ಹೈದರಾಬಾದ್ ತಂಡದ ನಾಯಕತ್ವ ನನ್ನ ವೃತ್ತಿಜೀವನದ ಅತ್ಯಂತ ದೊಡ್ಡ ಜವಾಬ್ದಾರಿ. ಅಭ್ಯಾಸದ ಸಂದರ್ಭದಲ್ಲಿ ತರಬೇತುದಾರರ ನೇತೃತ್ವದಲ್ಲಿ ಬೆವರು ಹರಿಸಿದ್ದೇವೆ. ಅದರ ಫಲವನ್ನು ಟೂರ್ನಿಯಲ್ಲಿ ಕಾಣಬೇಕಿದೆ‘ ಎಂದು ಮೊದಲ ಬಾರಿ ತಂಡವೊಂದರ ಸಾರಥ್ಯ ವಹಿಸಿಕೊಳ್ಳುತ್ತಿರುವ ಆದಿಲ್‌ ಖಾನ್‌ ಹೇಳಿದ್ದಾರೆ. ಹೈದರಾಬಾದ್‌ ತಂಡದೊಂದಿಗಿನ ಆದಿಲ್‌ ಖಾನ್‌ ಅವರ ಒಪ್ಪಂದ 2023ರವರೆಗೆ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.