2023: ನ್ಯೂಜಿಲೆಂಡ್‌ಗೆ ಅಫ್ಗಾನಿಸ್ತಾನ ಸವಾಲು ಚೆನ್ನೈ: ಎರಡು ದಿನಗಳ ಹಿಂದೆಯಷ್ಟೇ ಪ್ರಬಲ ಇಂಗ್ಲೆಂಡ್‌ ತಂಡದ ಮೇಲೆ ಸಾಧಿಸಿದ ಅಚ್ಚರಿಯ ಗೆಲುವು ಅಫ್ಗಾನಿಸ್ತಾನ ತಂಡದಲ್ಲಿ ನವೋಲ್ಲಾಸ ಮೂಡಿಸಿದೆ. ಅಜೇಯ ನ್ಯೂಜಿಲೆಂಡ್‌ ತಂಡ ಬುಧವಾರ ಇಲ್ಲಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಎದುರಾಳಿಯಾಗಿರುವ ಹಷ್ಮತ್‌ಉಲ್ಲಾ ಶಾಹಿದಿ ಪಡೆಯನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಆಡಿದ ಮೂರೂ ಪಂದ್ಯಗಳಲ್ಲಿ ಜಯಗಳಿಸಿರುವ ಕಿವೀಸ್ ತಂಡ ಯಶಸ್ಸಿನ ಓಟವನ್ನು ಮುಂದುವರಿಸುವ ಉಮೇದಿನಲ್ಲಿದೆ. ಇನ್ನೊಂದೆಡೆ ಭಾನುವಾರ ದೆಹಲಿಯಲ್ಲಿ ಇಂಗ್ಲೆಂಡ್ ಮೇಲೆ 69 ರನ್‌ಗಳ ಜಯ ಪಡೆದ ಅಫ್ಗಾನಿಸ್ತಾನ ಮತ್ತೊಂದು ಅನಿರೀಕ್ಷಿತ ಫಲಿತಾಂಶದ ವಿಶ್ವಾಸದಲ್ಲಿದೆ. ಅಫ್ಗಾನಿಸ್ತಾನ ತಂಡ ಆ ಪಂದ್ಯಕ್ಕೆ ಮೊದಲು, ಬಾಂಗ್ಲಾದೇಶ ಮತ್ತು ಭಾರತದ ಎದುರು ಸೋಲನುಭವಿಸಿತ್ತು. ಆದರೆ ದೆಹಲಿಯ ಜಯ ಕಳೆಗುಂದಿದ ಅದರ ವರ್ಚಸ್ಸನ್ನು ವೃದ್ಧಿಸಿದೆ. ಕೇನ್‌ ವಿಲಿಯಮ್ಸನ್ ಪುನರಾಗಮನ ಪಂದ್ಯದಲ್ಲೇ ಗಾಯಾಳಾಗಿರುವ ಕಾರಣ ಟಾಮ್‌ ಲಥಾಮ್ ನ್ಯೂಜಿಲೆಂಡ್ ತಂಡವನ್ನು ಮತ್ತೆ ಮುನ್ನಡೆಸಲಿದ್ದಾರೆ. ಬಾಂಗ್ಲಾ ವಿರುದ್ಧ ಪಂದ್ಯದ ವೇಳೆ ರನ್ನಿಗಾಗಿ ಓಡುವಾಗ ಫೀಲ್ಡರ್ ಎಸೆದ ಚೆಂಡು ವಿಲಿಯಮ್ಸನ್ ಅವರ ಎಡ ಹೆಬ್ಬೆರಳಿನ ಮೂಳೆಗೆ ಪೆಟ್ಟುಮಾಡಿತ್ತು. ಹೀಗಾಗಿ ಮೊದಲ ಎರಡು ಪಂದ್ಯ ತಪ್ಪಿಸಿಕೊಂಡಿದ್ದ ಅವರು ಮತ್ತೆ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ನ್ಯೂಜಿಲೆಂಡ್ ತಂಡದ ಅಗ್ರ ಕ್ರಮಾಂಕದ ಆಟಗಾರರು ಉತ್ತಮ ಲಯದಲ್ಲಿದ್ದಾರೆ. ಬ್ಯಾಟರ್‌ಗಳಾದ ವಿಲ್‌ ಯಂಗ್‌, ಡೇರಿಲ್ ಮಿಚೆಲ್, ಡೆವಾನ್ ಕಾನ್ವೆ ಜೊತೆಗೆ ಆಲ್‌ರೌಂಡ್ ಆಟಗಾರ ರಚಿನ್ ರವೀಂದ್ರ ಅವರ ಪ್ರದರ್ಶನ ಕುತೂಹಲಕ್ಕೆ ಎಡೆಮಾಡಿದೆ. ರಚಿನ್ ಈ ಬಾರಿ ಒಂದು ಶತಕ, ಒಂದು ಅರ್ಧ ಶತಕ ಗಳಿಸಿದ್ದಾರೆ. ಆದರೆ ಈ ತಂಡದ ಆಟಗಾರರು ಅಫ್ಗಾನಿಸ್ತಾನ ತಂಡದ ಸ್ಪಿನ್ನರ್‌ಗಳ ವಿಡಿಯೊ ತುಣುಕುಗಳನ್ನು ನೋಡದೇ ಇರಲಾರರು. ರಶೀದ್‌ ಖಾನ್, ಮೊಹಮ್ಮದ್ ನಬಿ, ಮುಜೀಬ್ ಉರ್‌ ರೆಹಮಾನ್ ಅವರ ಸ್ಪಿನ್ ಜಾಲಕ್ಕೆ ಇಂಗ್ಲೆಂಡ್‌ ಬ್ಯಾಟರ್‌ಗಳು ಸಿಲುಕಿದ್ದರು. ಸಾಂಪ್ರದಾಯಿಕವಾಗಿ ಸ್ಪಿನ್ನರ್‌ಗಳಿಗೆ ನೆರವಾಗುವ ಚೆಪಾಕ್‌ ಪಿಚ್‌ನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ನ್ಯೂಜಿಲೆಂಡ್ ಎಚ್ಚರಿಕೆ ವಹಿಸಬೇಕಿದೆ. ಅಫ್ಗಾನಿಸ್ತಾನದ ಬ್ಯಾಟರ್‌ಗಳ ಪೈಕಿ ರಹಮಾನುಲ್ಲಾ ಗುರ್ಬಾಝ್ ಉತ್ತಮ ಲಯದಲ್ಲಿದ್ದು ಎರಡು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ನಾಯಕ ಶಾಹಿದಿ, ಅಜ್ಮತ್‌ಉಲ್ಲಾ ಒಮ್ರಾಝೈ ಮತ್ತು ಇಕ್ರಮ್‌ ಅಲಿಖಿಲ್ ಅವರೂ ಉಪಯುಕ್ತ ಇನಿಂಗ್ಸ್‌ ಆಡಬಲ್ಲರೆಂಬುದನ್ನು ಸಾಬೀತುಪಡಿಸಿದ್ದಾರೆ. ಬೌಲ್ಟ್‌, ಮ್ಯಾಟ್‌ ಹೆನ್ರಿ ಮೊದಲಾದವರಿಂದ ನ್ಯೂಜಿಲೆಂಡ್‌ನ ವೇಗದ ದಾಳಿ ಪ್ರಬಲವಾಗಿಯೇ ಇದೆ. ಹೆಬ್ಬೆರಳ ಗಾಯದಿಂದ ಚೇತರಿಸಿಕೊಂಡಿರುವ ಮಧ್ಯಮ ವೇಗಿ ಟಿಮ್‌ ಸೌಥಿ ಈ ಪಂದ್ಯಕ್ಕೆ ಅವಕಾಶ ಪಡೆಯುತ್ತಾರೆಯೇ ಎಂಬ ಕುತೂಹಲ ಇದೆ. ಸ್ಪಿನ್‌ದ್ವಯರಾದ ರವೀಂದ್ರ ಮತ್ತು ಸ್ಯಾಂಟ್ನರ್ ಅವರನ್ನು ಹೇಗೆ ಎದುರಿಸಬಲ್ಲರು ಎಂಬುದು ಕುತೂಹಲಕರ. ಸ್ಯಾಂಟ್ನರ್ ಈ ವಿಶ್ವಕಪ್‌ನಲ್ಲಿ ಎಂಟು ವಿಕೆಟ್‌ಗಳನ್ನು ಪಡೆದಿದ್ದಾರೆ. ಇವೆರಡು ತಂಡಗಳು ಇದುವರೆಗೆ ಎರಡು ಬಾರಿಯಷ್ಟೇ ಮುಖಾಮುಖಿ ಆಗಿವೆ. ಎರಡೂ ಸಂದರ್ಭಗಳಲ್ಲಿ– ನೇಪಿಯರ್‌ನಲ್ಲಿ 2015ರ ವಿಶ್ವಕಪ್‌ನ ಗುಂಪು ಪಂದ್ಯದಲ್ಲಿ ಟಾಂಟನ್‌ನಲ್ಲಿ ನಡೆದ 2019ರ ವಿಶ್ವಕಪ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ಸುಲಭ ಜಯಗಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.