ಸಚಿನ್‌ ತೆಂಡೂಲ್ಕರ್‌ ಪ್ರತಿಮೆ ಇಂದು ಲೋಕಾರ್ಪಣೆ ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಜೀವನಗಾಥೆಯನ್ನು ಸಾರುವ ಪ್ರತಿಮೆಯ ಲೋಕಾರ್ಪಣೆ ಬುಧವಾರ ನಡೆಯಲಿದೆ. ಗುರುವಾರ ಇಲ್ಲಿ ಭಾರತ ಮತ್ತು ಶ್ರೀಲಂಕಾ ಮಧ್ಯೆ ವಿಶ್ವಕಪ್‌ ಟೂರ್ನಿಯ ಪಂದ್ಯ ನಡೆಯಲಿದ್ದು, ಅದರ ಮುನ್ನದಿನ ಸಚಿನ್‌ ಅವರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲು ಸಿದ್ಧತೆ ನಡೆದಿದೆ. ಏಪ್ರಿಲ್‌ನಲ್ಲಿ 50ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಸಚಿನ್‌ ಅವರ ಪ್ರತಿಮೆಯನ್ನು ವಾಂಖೆಡೆ ಕ್ರೀಡಾಂಗಣದೊಳಗೆ ಮುಂಬೈ ಕ್ರಿಕೆಟ್ ಸಂಸ್ಥೆ ನಿರ್ಮಿಸಿದೆ. ಸ್ಟ್ರೋಕ್‌ ಮಾಡುವ ಭಂಗಿಯಲ್ಲಿರುವ ಪ್ರತಿಮೆಗೆ ಮಂಗಳವಾರ ಅಂತಿಮ ಸ್ಪರ್ಶ ನೀಡಲಾಯಿತು. ಪ್ರತಿಮೆ ಲೋಕಾರ್ಪಣಾ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್‌ ಸೇರಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಖಜಾಂಚಿ ಆಶಿಶ್ ಶೆಲಾರ್, ಮುಂಬೈ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅಮೋಲ್ ಕಾಳೆ, ಕಾರ್ಯದರ್ಶಿ ಅಜಿಂಕ್ಯ ನಾಯ್ಕ್ ಭಾಗವಹಿಸಲಿದ್ದಾರೆ. 2013ರ ನವೆಂಬರ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಸಚಿನ್‌ ಅವರು ತವರಿನ ಕ್ರೀಡಾಂಗಣದಲ್ಲಿ ಕೊನೆಯ ಬಾರಿ ಆಡಿದ್ದರು. ಅದಾದ 10 ವರ್ಷದ ಬಳಿಕ ಅವರ ಪ್ರತಿಮೆ ನಿರ್ಮಾಣವಾಗಿದೆ. ಅಹಮದ್‌ ನಗರದ ಕಲಾವಿದ ಪ್ರಮೋದ್‌ ಕಾಂಬ್ಳೆ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.