ನಿಯಮ ಪಾಲಿಸಿದವರ ಬಗ್ಗೆ ವಿರೋಧ ಸಲ್ಲ: ದ್ರಾವಿಡ್ ಬೆಂಗಳೂರು: ‘ನಾವೆಲ್ಲರೂ ವಿಭಿನ್ನ ಯೋಚನಾಲಹರಿ ಹೊಂದಿರುವವರು. ಅದೇ ರೀತಿ ಚಿಂತನೆಗಳೂ ವಿಭಿನ್ನ. ಯಾವುದೇ ವ್ಯಕ್ತಿ ನಿಯಮವನ್ನು ಅರಿತು ಬಳಸಿಕೊಂಡರೆ ವಿರೋಧಿಸುವುದು ಸರಿಯಲ್ಲ’ ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದರು. ಶ್ರೀಲಂಕಾ ತಂಡದ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಅವರ ಟೈಮ್ಡ್ ಔಟ್ ಪ್ರಕರಣದ ಕುರಿತು ಅವರು ಪ್ರತಿಕ್ರಿಯಿಸಿದರು. ಈ ಪ್ರಕರಣದಲ್ಲಿ ಮ್ಯಾಥ್ಯೂಸ್ ಅವರನ್ನು ಔಟ್ ನೀಡಬೇಕು ಎಂದು ಅಪೀಲ್ ಮಾಡಿದ್ದ ಬಾಂಗ್ಲಾ ತಂಡದ ನಾಯಕ ಶಕೀಬ್ ಅಲ್ ಹಸನ್ ವಿರುದ್ಧ ಬಹಳಷ್ಟು ಜನ ಟೀಕಿಸಿದ್ದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಪ್ಪು ಅಥವಾ ಸರಿ ಎಂಬುದು ಇಲ್ಲಿ ಇಲ್ಲ. ಪ್ರತಿಯೊಬ್ಬರ ಯೋಚನೆಗಳು ಭಿನ್ನವಾಗಿರುತ್ತವೆ. ಇಂತಹ ವೈರುಧ್ಯಗಳು ಇರುವುದು ಒಳ್ಳೆಯದು. ಅವರು ನಿಯಮದ ಚೌಕಟ್ಟಿನೊಳಗೆ ಇದ್ದು ಮನವಿ ಮಾಡಿದ್ದರು. ಇದನ್ನು ಇನ್ನೊಬ್ಬರು ಮತ್ತೊಂದು ಆಯಾಮದಿಂದ ನೋಡಬಹುದು’ಎಂದರು. ಭಾರತ ತಂಡದ ಇದುವರೆಗಿನ ಸಾಧನೆಯ ಕುರಿತು ಮಾತನಾಡಿದ ಅವರು, ‘ರೋಹಿತ್ ನಿಜವಾದ ನಾಯಕನಾಗಿ ಹೊರಹೊಮ್ಮಿದ್ದಾರೆ. ಕ್ರೀಡಾಂಗಣದೊಳಗೆ ಮತ್ತು ಹೊರಗೆ ಅವರು ತಮ್ಮ ನಾಯಕತ್ವದ ಮಾದರಿ ತೋರಿಸಿದ್ದಾರೆ. ಜೊತೆಗೆ ಬ್ಯಾಟಿಂಗ್ ಮೂಲಕವೂ ತಂಡಕ್ಕೆ ಕಾಣಿಕೆ ನೀಡುತ್ತಿದ್ದಾರೆ. ಅವರು ಉತ್ತಮ ಆರಂಭ ನೀಡುತ್ತಿರುವುದರಿಂದ ಉಳಿದ ಬ್ಯಾಟರ್‌ಗಳಿಗೆ ಆಡುವುದು ಸುಲಭವಾಗುತ್ತಿದೆ’ ಎಂದು ಶ್ಲಾಘಿಸಿದರು. ಈ ಟೂರ್ನಿಯಲ್ಲಿ ರೋಹಿತ್ ಒಟ್ಟು 443 ರನ್‌ಗಳನ್ನು ಗಳಿಸಿದ್ದಾರೆ. 122ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ರನ್ ಗಳಿಸಿದ್ದಾರೆ. ‘ನಾಯಕರಾದವರು ಉತ್ತಮ ಮಾದರಿಯನ್ನು ತೋರದಿದ್ದರೆ ಯಶಸ್ಸಿನ ಹಾದಿ ಕಠಿಣವಾಗುತ್ತದೆ. ಅಂತಹದೊಂದು ಕಾರ್ಯವನ್ನು ರೋಹಿತ್ ಮಾಡಿದ್ದಾರೆ. ಇದು ಉಳಿದವರಿಗೆ ಮಾರ್ಗದರ್ಶಿಯಾಗಿದೆ’ ಎಂದರು. ’ತಂಡದ ಮಧ್ಯಮ ಕ್ರಮಾಂಕವು ಬಹಳ ಬಲಾಢ್ಯವಾಗಿದೆ. ಕೆ.ಎಲ್. ರಾಹುಲ್ ಇನಿಂಗ್ಸ್‌ ಆರಂಭಿಸುವ ಬದಲು ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿರುವುದು ಇದಕ್ಕೆ ಕಾರಣ. ತಂಡವು ಒತ್ತಡದ ಸ್ಥಿತಿಯಲ್ಲಿದ್ದಾಗ ಮಧ್ಯಮ ಕ್ರಮಾಂಕವು ಉತ್ತಮವಾಗಿ ಆಡಬೇಕಾಗುತ್ತದೆ. ಆ ಕಾರ್ಯವನ್ನು ಈಗಿರುವ ಬ್ಯಾಟರ್‌ಗಳು ಸಮರ್ಥವಾಗಿ ನಿಭಾಯಿಸಿದ್ದಾರೆ’ ಎಂದೂ ದ್ರಾವಿಡ್ ಹೇಳಿದರು. ಲಂಡನ್ (ಪಿಟಿಐ): ಶ್ರೀಲಂಕಾದ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್ ಅವರ ವಿರುದ್ಧ ಟೈಮ್ಡ್ ಔಟ್ ನೀಡಿದ ಅಂಪೈರ್‌ಗಳ ತೀರ್ಮಾನವು ಸೂಕ್ತವಾಗಿದೆ ಎಂದು ಮೆರಿಲ್‌ಬೊನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಶನಿವಾರ ಹೇಳಿದೆ. ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಲೀಗ್ ಪಂದ್ಯದಲ್ಲಿ ಲಂಕಾದ ಬ್ಯಾಟರ್ ಮ್ಯಾಥ್ಯೂಸ್ ಟೈಮ್ಡ್ ಔಟ್ ಆಗಿದ್ದರು. ಕ್ರಿಕೆಟ್ ಇತಿಹಾಸದಲ್ಲಿಯೇ ಈ ರೀತಿ ಔಟಾದ ಮೊದಲ ಬ್ಯಾಟರ್ ಅವರಾಗಿದ್ದಾರೆ. ಈ ಪ್ರಕರಣವು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪರ ವಿರೋಧ ಚರ್ಚೆಯ ನಡುವೆ ಅಂಪೈರ್‌ಗಳ ಬಗ್ಗೆಯೂ ಟೀಕೆಗಳು ಕೇಳಿಬಂದಿವೆ. ‘ತಮ್ಮ ಹೆಲ್ಮೆಟ್ ಪಟ್ಟಿಯು ಕಿತ್ತುಹೋಗಿರುವುದನ್ನು ಅರಿತ ಮ್ಯಾಥ್ಯೂಸ್ ಅಂಪೈರ್‌ಗಳಿಗೆ ತಿಳಿಸಬೇಕಿತ್ತು. ಆಟಗಾರರು ಕ್ರೀಸ್‌ನಲ್ಲಿದ್ದಾಗ ತಮ್ಮ ಆಟದ ಸಲಕರಣೆಗಳನ್ನು ಬದಲಿಸುವಾಗ ಅಂಪೈರ್‌ಗಳಿಂದ ಅನುಮತಿ ಪಡೆಯುವುದು ನಿಯಮ. ಆದರೆ ಮ್ಯಾಥ್ಯೂಸ್ ಆ ರೀತಿ ಮಾಡಲಿಲ್ಲ. ತಮ್ಮ ತಂಡದ ಡ್ರೆಸಿಂಗ್ ರೂಮ್‌ನಲ್ಲಿದ್ದ ಸಹ ಆಟಗಾರರಿಗೆ ಹೊಸ ಹೆಲ್ಮೆಟ್‌ ತರುವಂತೆ ಸೂಚಿಸಿದರು’ ಎಂದು ಎಂಸಿಸಿಯು ಪ್ರಕಟಣೆಯಲ್ಲಿ ವಿವರಿಸಿದೆ. ಒಬ್ಬ ಬ್ಯಾಟರ್ ಔಟಾಗಿ ಅಥವಾ ಗಾಯಗೊಂಡು ನಿವೃತ್ತಿಯಾಗಿ ಹೊರನಡೆದಾಗ ಇನ್ನೊಬ್ಬ ಬ್ಯಾಟರ್ ಎರಡು ನಿಮಿಷಗಳೊಳಗೆ ಕ್ರೀಸ್‌ಗೆ ಬಂದು ಎಸೆತ ಎದುರಿಸಲು ಸಿದ್ಧವಾಗಿಬಿಡಬೇಕೆಂಬುದು ನಿಯಮವಾಗಿದೆ. ‘ಈ ಪ್ರಕರಣದಲ್ಲಿ ಎರಡು ನಿಮಿಷಗಳು ದಾಟಿಹೋದ ಮೇಲೆ ಬಾಂಗ್ಲಾದ ಆಟಗಾರರು ಅಪೀಲ್ ಮಾಡಿದ್ದರು. ಇದರಿಂದಾಗಿ ಅಂಪೈರ್‌ಗಳು ಔಟ್ ನೀಡಿದರು. ಅವರ ತೀರ್ಪುಗಳು ಸರಿಯಾಗಿವೆ’ ಎಂದು ಎಂಸಿಸಿ ಪ್ರತಿಪಾದಿಸಿದೆ. ಆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮರಾಯಸ್ ಎರಸ್ಮಸ್ ಮತ್ತು ಇಂಗ್ಲೆಂಡಿನ ರಿಚರ್ಡ್ ಇಲಿಂಗ್‌ವರ್ಥ್ ಅವರು ಅಂಪೈರ್‌ಗಳಾಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.