| ವಿಶ್ವಕಪ್‌ನಲ್ಲಿ ಸತತ ಜಯ; ಆಸ್ಟ್ರೇಲಿಯಾ ದಾಖಲೆ ಸರಿಗಟ್ಟುವತ್ತ ಭಾರತ ಬೆಂಗಳೂರು: ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿರುವ ಭಾರತ, ಲೀಗ್ ಹಂತದಲ್ಲಿ ಆಡಿರುವ ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯ ಓಟ ಮುಂದುವರಿಸಿದೆ. ಭಾರತವು ವಿಶ್ವಕಪ್‌ ಟೂರ್ನಿಯೊಂದರಲ್ಲಿ ಸತತ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವುದು ಇದೇ ಮೊದಲು. 2003ರಲ್ಲಿ ಸೌರವ್‌ ಗಂಗೂಲಿ ನಾಯಕತ್ವದಲ್ಲಿ ಆಡಿದ್ದಾಗ ಸತತ 8 ಜಯ ಕಂಡಿತ್ತು. ಇದಷ್ಟೇ ಅಲ್ಲ. ಭಾರತ ತಂಡ ಈ ವರ್ಷ ಒಟ್ಟು 24 ಏಕದಿನ ಪಂದ್ಯಗಳನ್ನು ಗೆದ್ದಿದ್ದು, ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಅವಕಾಶವಿದೆ. 1998ರಲ್ಲಿಯೂ ಇಷ್ಟೇ ಪಂದ್ಯಗಳನ್ನು ಗೆದ್ದಿರುವುದು ಟೀಂ ಇಂಡಿಯಾ ಪಾಲಿಗೆ ದಾಖಲೆಯಾಗಿದೆ. ದಾಖಲೆ ಸರಿಗಟ್ಟುವ ಅವಕಾಶ ಟೂರ್ನಿಯೊಂದರಲ್ಲಿ ಸತತವಾಗಿ ಹೆಚ್ಚು ಜಯ ಪಡೆದ ತಂಡ ಎಂಬ ದಾಖಲೆ ಸದ್ಯ ಆಸ್ಟ್ರೇಲಿಯಾ ಹೆಸರಲ್ಲಿದೆ. ಆ ತಂಡ 2003 ಹಾಗೂ 2007ರಲ್ಲಿ ತಲಾ 11 ಜಯ ಸಾಧಿಸಿದೆ. ರೋಹಿತ್‌ ಶರ್ಮಾ ನೇತೃತ್ವದ ಟೀಂ ಇಂಡಿಯಾಗೆ ಈ ದಾಖಲೆಯನ್ನು ಸರಿಗಟ್ಟುವ ಅವಕಾಶವಿದೆ. ಅದಕ್ಕಾಗಿ ಈ ಬಾರಿ ಸೆಮಿಫೈನಲ್‌ ಹಾಗೂ ಫೈನಲ್‌ನಲ್ಲಿ ಗೆದ್ದು ಚಾಂಪಿಯನ್‌ ಆಗಬೇಕಿದೆ. ರೋಹಿತ್‌ ಪಡೆ ಇದೇ (ನವೆಂಬರ್‌) 15ರಂದು ಮುಂಬೈನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೆಮಿಫೈನಲ್‌ ಆಡಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನವೆಂಬರ್ 19ರಂದು ಫೈನಲ್‌ ನಡೆಯಲಿದೆ. ವಿಶ್ವಕಪ್‌ ಟೂರ್ನಿಯಲ್ಲಿ ಸತತ ಜಯ ಆಸ್ಟ್ರೇಲಿಯಾ: 2003ರಲ್ಲಿ ಸತತ 11 ಜಯ ಆಸ್ಟ್ರೇಲಿಯಾ: 2007ರಲ್ಲಿ ಸತತ 11 ಜಯ ಭಾರತ: 2023ರಲ್ಲಿ ಸತತ 9 ಜಯ ಭಾರತ: 2003ರಲ್ಲಿ ಸತತ 8 ಜಯ ನ್ಯೂಜಿಲೆಂಡ್‌: 2015ರಲ್ಲಿ ಸತತ 8 ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.