: ಐಸಿಸಿ ಪಿಚ್‌ ಕನ್ಸಲ್ಟೆಂಟ್‌ ತವರಿಗೆ? ಅಹಮದಾಬಾದ್: ಐಸಿಸಿ ಪಿಚ್‌ ಕನ್ಸಲ್ಟೆಂಟ್ ಆ್ಯಂಡಿ ಅಟ್ಕಿನ್ಸನ್ ಅವರ ಭವಿಷ್ಯದ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ವಿಶ್ವಕಪ್‌ ಫೈನಲ್‌ಗೆ 48 ಗಂಟೆಗಳಿರುವಂತೆ ಅವರು ಎಲ್ಲೂ ಕಾಣಿಸಿಕೊಂಡಿಲ್ಲ. ಅವರು ಈಗಾಗಲೇ ತವರಿಗೆ ವಾಪಸಾಗಿದ್ದಾರೆ ಎನ್ನಲಾಗುತ್ತಿದೆ. ‘ಆ್ಯಂಡಿ ಅವರ ಅಸೈನ್‌ಮೆಂಟ್‌ ಮುಗಿದಿದೆ. ಇಲ್ಲಿ ವಿವಾದ ಹುಡುಕಲು ಹೋಗಬೇಡಿ. ಅವರು ಫೈನಲ್‌ಗೆ ಇರಬೇಕೆಂದೇನಿಲ್ಲ’ ಎಂದು ಬಿಸಿಸಿಐನ ಮೂಲವೊಂದು ಸುದ್ದಿಸಂಸ್ಥೆಗೆ ತಿಳಿಸಿದೆ. ಭಾರತದ ಅನುಕೂಲಕ್ಕಾಗಿ ಸೆಮಿಫೈನಲ್‌ ಪಂದ್ಯವನ್ನು ವಾಂಖೆಡೆಯ ಹೊಸ ಪಿಚ್‌ ಬದಲು ಈಗಾಗಲೇ ಬಳಸಲಾಗಿದ್ದ ಪಿಚ್‌ನಲ್ಲಿ ಆಡಿಸಲಾಗಿದೆ ಎಂದು ಅಟ್ಕಿನ್ಸನ್ ಆರೋಪಿಸಿದ್ದರು ಎನ್ನಲಾಗಿದ್ದು, ಇದು ಬಿಸಿಸಿಐಗೆ ರುಚಿಸಿರಲಿಲ್ಲ. ಆದರೆ ಪಿಚ್‌ ಬದಲಾಯಿಸಬಾರದು ಎಂಬ ನಿಯಮ ಏನಿಲ್ಲ ಎಂದು ಐಸಿಸಿ ಸ್ಪಷ್ಟೀಕರಣ ನೀಡಿತ್ತು. ಫೈನಲ್‌ ಪಂದ್ಯದ ಪಿಚ್‌ ಸಿದ್ಧತೆಯನ್ನು ಬಿಸಿಸಿಐನ ಗ್ರೌಂಡ್‌ಸ್ಟಾಫ್‌ ಆಶಿಷ್‌ ಭೌಮಿಕ್ ಮತ್ತು ತಪಸ್‌ ಚಟರ್ಜಿ ಪರಿಶೀಲಿಸಿದ್ದು ಕಂಡಿತು. ಅವರೊಂದಿಗೆ ಬಿಸಿಸಿಐನ ಜಿಎಂ (ದೇಶೀಯ ಕ್ರಿಕೆಟ್‌) ಅಬೇ ಕುರುವಿಲ್ಲಾ ಕೂಡ ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.