ಮೂಡುಬಿದಿರೆ: ವಿಶ್ವಕಪ್ ಟ್ರೋಫಿಯ ಚಿನ್ನದ ಪ್ರತಿಕೃತಿ ತಯಾರಿಸಿದ ಅಕ್ಕಸಾಲಿಗ ಮೂಡುಬಿದಿರೆ (ದಕ್ಷಿಣ ಕನ್ನಡ): ವಿಶ್ವಕಪ್ ಕ್ರಿಕೆಟ್‌ನ ಫೈನಲ್‌ನಲ್ಲಿ ಭಾರತ ಗೆಲುವು ಸಾಧಿಸಲಿ ಎಂಬ ಆಶಯದೊಂದಿಗೆ ಇಲ್ಲಿನ ಕ್ರಿಕೆಟ್ ಅಭಿಮಾನಿ ಅಕ್ಕಸಾಲಿಗರೊಬ್ಬರು ವಿಶ್ವಕಪ್ ಟ್ರೋಫಿಯ ಪ್ರತಿಕೃತಿಯನ್ನು ಚಿನ್ನದಲ್ಲಿ ತಯಾರಿಸಿದ್ದಾರೆ. 1 ಇಂಚು, 1 ಮಿಲಿ ಮೀಟರ್‌ ಉದ್ದದ ಟ್ರೋಫಿಯ ಪ್ರತಿಕೃತಿ ತಯಾರಿಸಲು 50 ಮಿಲಿ ಗ್ರಾಂ ಚಿನ್ನ ಬಳಸಿದ್ದಾರೆ. ತೆಳ್ಳಗಿನ ತಗಡಿಗೆ ಚಿನ್ನ ಲೇಪಿಸಿದ್ದಾರೆ. ವೇಣೂರು ಕುಂಡದಬೆಟ್ಟು ರತ್ನ-ನಾರಾಯಣ ಆಚಾರ್ಯ ದಂಪತಿ ಪುತ್ರ ಸತೀಶ್ ಆಚಾರ್ಯ ಅವರು ಮೂಡುಬಿದಿರೆಯ ದೊಡ್ಮನೆ ರಸ್ತೆ ಬಳಿ ಅಕ್ಕಸಾಲಿಗ ಕೆಲಸ ಮಾಡಿಕೊಂಡಿದ್ದಾರೆ. 2007ರ ಟಿ-20 ವಿಶ್ವಕಪ್ ವೇಳೆ 1.200 ಮಿ.ಗ್ರಾಂ ಚಿನ್ನದಲ್ಲಿ ಟ್ರೋಫಿಯ ಪ್ರತಿಕೃತಿ, 2011ರ ವಿಶ್ವಕಪ್ ಟ್ರೋಫಿಯ ಪ್ರತಿಕೃತಿಯನ್ನು 3 ಗ್ರಾಂ ಬೆಳ್ಳಿಯಲ್ಲಿ, 2013ರ ಚಾಂಪಿಯನ್ ಟ್ರೋಫಿಯ ಪ್ರತಿಕೃತಿಯನ್ನು 500 ಮಿ.ಗ್ರಾಂ ಚಿನ್ನದಲ್ಲಿ ತಯಾರಿಸಿದ್ದರು. ಈಗ 2023ರ ವಿಶ್ವಕಪ್ ಟ್ರೋಫಿಯ ಮಾದರಿಯನ್ನು ಕಡಿಮೆ ಚಿನ್ನ ಬಳಸಿ ತಯಾರಿಸಿದ್ದಾರೆ. ‘ನಾನು ಕ್ರಿಕೆಟ್ ಅಭಿಮಾನಿ. ಈ ಬಾರಿಯ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ಗೆಲ್ಲಬೇಕು ಹಾಗೂ ಕಡಿಮೆ ಪ್ರಮಾಣದ ಚಿನ್ನ ಬಳಕೆ ಮಾಡಿ ವಿಶ್ವಕಪ್ ಟ್ರೋಫಿಯ ಮಾದರಿಯನ್ನು ಚಿನ್ನದಲ್ಲಿ ತಯಾರಿಸಿ ಗಿನ್ನಿಸ್‌ ದಾಖಲೆ ಮಾಡಬೇಕು ಎಂಬುದು ನನ್ನ ಆಸೆ’ ಎಂದು ಸತೀಶ್ ಆಚಾರ್ಯ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.