ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿ: ಈಸ್ಟ್‌ ಬೆಂಗಾಲ್‌ಗೆ ಜಯ ಕೋಲ್ಕತ್ತ: ಈಸ್ಟ್‌ ಬೆಂಗಾಲ್‌ ತಂಡದವರು ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ 1–0 ಅಂತರದಿಂದ ಸಾಂಪ್ರದಾಯಿಕ ಎದುರಾಳಿ ಮೋಹನ್‌ ಬಾಗನ್‌ ತಂಡದವರನ್ನು ಮಣಿಸಿದರು. 60ನೇ ನಿಮಿಷದಲ್ಲಿ ನಂದಕುಮಾರ್‌ ಶೇಖರ್‌ ಗಳಿಸಿದ ಗೋಲಿನ ನೆರವಿನಿಂದ ಬೆಂಗಾಲ್‌ ತಂಡ ಗೆಲುವು ಸಾಧಿಸಿತು. ಈ ಮೂಲಕ ಬಾಗನ್‌ ತಂಡದ ಕ್ವಾರ್ಟರ್ ಫೈನಲ್‌ಗೆ ಸುಗಮವಾಗಿ ಪ್ರವೇಶಿಸುವ ಕನಸನ್ನು ಕೊಂಚ ತಡೆಹಿಡಿಯಿತು. ಹಾಲಿ ಐಎಸ್‌ಎಲ್‌ ಚಾಂಪಿಯನ್ ಮೋಹನ್ ಬಾಗನ್ ತಂಡವನ್ನು ಈಸ್ಟ್ ಬೆಂಗಾಲ್ ತಂಡವು ನಾಲ್ಕೂವರೆ ವರ್ಷಗಳಿಂದ ಸೋಲಿಸಿರಲಿಲ್ಲ. ಇದೀಗ 1658 ದಿನಗಳ ಕಾಯುವಿಕೆಯ ನಂತರ ಬೆಂಗಾಲ್‌ ಜಯ ಸಾಧಿಸಿದೆ. 2019ರ ಜನವರಿ 27ರಂದು ಐ–ಲೀಗ್‌ನಲ್ಲಿ ಕೊನೆಯ ಬಾರಿ ಬಾಗನ್‌ ತಂಡವನ್ನು 2–0ಯಿಂದ ಸೋಲಿಸಿತ್ತು. ನಂತರದ ಒಟ್ಟು 9 ಪಂದ್ಯಗಳಲ್ಲಿ 1 ಡ್ರಾ ಆಗಿತ್ತು. 8 ಪಂದ್ಯಗಳಲ್ಲಿ ಬೆಂಗಾಲ್‌ ತಂಡ ಪರಾಭವಗೊಂಡಿತ್ತು. ಗುವಾಹಟಿಯಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡದವರು 2–2ರಿಂದ ಎಫ್‌.ಸಿ ಗೋವಾ ತಂಡದವರೊಂದಿಗೆ ಡ್ರಾ ಸಾಧಿಸಿದರು. ‘ಡಿ’ ಗುಂಪಿನ ಪಂದ್ಯದಲ್ಲಿ ಮನ್ವಿರ್ ಸಿಂಗ್ 24ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದು ನಾರ್ತ್‌ಈಸ್ಟ್‌ ತಂಡಕ್ಕೆ ಮುನ್ನಡೆ ಒದಗಿಸಿದರು. ಆದರೆ, ಗೋವಾ ತಂಡದ ರೌಲಿನ್ ಬೋರ್ಗೆಸ್ (45+4) ಚೆಂಡನ್ನು ಗುರಿ ಸೇರಿಸಿ ಸಮಬಲಗೊಳಿಸಿದರು. 52ನೇ ನಿಮಿಷದಲ್ಲಿ ಸಂದೇಶ್ ಜಿಂಗನ್ ಅವರು ಗೋಲು ಗಳಿಸುವ ಮೂಲಕ ಮತ್ತೆ ನಾರ್ತ್‌ಈಸ್ಟ್‌ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ, 80ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋವಾದ ನೋಹ್ ಸದೌಯಿ ಚೆಂಡನ್ನು ಗುರಿ ಸೇರಿಸಿ ಸಮಬಲ ಸಾಧಿಸಿದರು. ಇಂದಿನ ಪಂದ್ಯಗಳು: ಕೇರಳ ಬ್ಯಾಸ್ಟರ್‌ – ಗೋಕುಲಂ ಕೇರಳ ಎಫ್‌.ಸಿ ಡೌನ್‌ಟೌನ್ ಹೀರೋಸ್ ಎಫ್‌ಸಿ– ಶಿಲ್ಲಾಂಗ್ ಲಜಾಂಗ್ ಎಫ್‌ಸಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.