ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌: ಜಪಾನ್‌ಗೆ ಸ್ವೀಡನ್‌ ಸವಾಲು ಆಕ್ಲೆಂಡ್‌: ಹಾಲಿ ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಜಪಾನ್‌ ತಂಡಕ್ಕೆ ಮಾತ್ರ ಹೆಚ್ಚು ಸತ್ವಪರೀಕ್ಷೆ ಎದುರಾಗಿಲ್ಲ. ಪ್ರಿಕ್ವಾರ್ಟರ್‌ಫೈನಲ್‌ನಲ್ಲೂ 4–0 ಅಂತರದ ಜಯಗಳಿಸಿದ್ದ ಈ ತಂಡ ಶುಕ್ರವಾರ ಆಕ್ಲೆಂಡ್‌ನ ಈಡನ್‌ಪಾರ್ಕ್‌ನಲ್ಲಿ ನಡೆಯುವ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸ್ವೀಡನ್‌ ತಂಡವನ್ನು ಎದುರಿಸಲಿದೆ. ನೆದರ್ಲೆಂಡ್ಸ್‌ ತಂಡ, ವೆಲ್ಲಿಂಗ್ಟನ್‌ನಲ್ಲಿ ಶುಕ್ರವಾರವೇ ನಡೆಯುವ ಎಂಟರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಸ್ಪೇನ್‌ ತಂಡವನ್ನು ಎದುರಿಸಲಿದೆ. ಸ್ವೀಡನ್‌ ಸವಾಲು: ಸ್ವೀಡನ್‌ ಮಹಿಳಾ ಕ್ರಮಾಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ವಿಶ್ವಕಪ್‌ನಲ್ಲಿ ಸ್ಪರ್ಧೆ ಇನ್ನೂ ಉಳಿಸಿಕೊಂಡಿರುವ ತಂಡಗಳಲ್ಲಿ ಸ್ಪೇನ್‌ ಗರಿಷ್ಠ ರ್‍ಯಾಂಕ್‌ ಹೊಂದಿದೆ. ಮೂರು ಬಾರಿ ಮೂರನೇ ಸ್ಥಾನದಲ್ಲಿ ವಿಶ್ವಕಪ್‌ ಅಭಿಯಾನ ಮುಗಿಸಿರುವ ಸ್ವೀಡನ್ ತಂಡ ಈ ಬಾರಿ ಫೈನಲ್‌ನಲ್ಲಿ ಆಡುವ ತವಕದಲ್ಲಿದೆ. ಸತತ ಮೂರನೇ ವಿಶ್ವಕಪ್‌ ಗೆಲ್ಲುವ ಅಮೆರಿಕದ ಕನಸಿಗೆ ತಣ್ಣೀರೆರಚಿದ ಸ್ವೀಡನ್‌, ಈ ಹಿಂದೆ ಮೂರು ಬಾರಿ ಸೆಮಿಫೈನಲ್‌ ತಲುಪಿದೆ. 2003ರಿಂದೀಚೆಗೆ ಫೈನಲ್‌ ತಲುಪಿಲ್ಲ. ಸ್ವೀಡನ್‌ ಗೋಲ್‌ಕೀಪರ್‌ ಝೆಸಿರಾ ಮುಸೋವಿಕ್‌ ಅವರ ಸಾಹಸದಿಂದ ಸ್ವೀಡನ್‌, ಶೂಟೌಟ್‌ನಲ್ಲಿ ಅಮೆರಿಕವನ್ನು ಸೋಲಿಸಿತ್ತು. ಜಪಾನ್‌ ತಂಡದ ಹಿನಾಟ ಮಿಯಾಝಾವಾ ಅವರು ನಾಲ್ಕು ಪಂದ್ಯಗಳಲ್ಲಿ ಐದು ಗೋಲುಗಳನ್ನು ಗಳಿಸಿದ್ದಾರೆ. ಅವರು ಗೋಲ್ಡನ್‌ ಬೂಟ್‌ ರೇಸ್‌ನಲ್ಲಿದ್ದಾರೆ. 2011ರಲ್ಲಿ ಜಪಾನ್‌ ವಿಶ್ವಕಪ್ ಗೆದ್ದಾಗ ಹೊಮಾರೆ ಸಾವಾ ಐದು ಗೋಲುಗಳಿಸಿದ್ದು, ಹಿನಾಟ ಅದನ್ನು ಈಗಾಗಲೇ ಸರಿಗಟ್ಟಿದ್ದಾರೆ. ಜಪಾನ್‌ ಇದುವರೆಗಿನ ಪಂದ್ಯಗಳಲ್ಲಿ ದಾಖಲೆ 14 ಗೋಲುಗಳನ್ನು ಗಳಿಸಿದ್ದು, ಒಂದು ಗೋಲು ಮಾತ್ರ ಬಿಟ್ಟುಕೊಟ್ಟಿದೆ. ನಾರ್ವೆ ವಿರುದ್ಧ ನಾಕೌಟ್‌ ಪಂದ್ಯದಲ್ಲಿ 3–1 ಗೆಲುವಿನಲ್ಲಿ ಆ ಗೋಲು ಬಿಟ್ಟುಕೊಟ್ಟಿತ್ತು. ಪ್ರತಿಷ್ಠೆಯ ಪಂದ್ಯ:‌ ನಾಲ್ಕು ವರ್ಷಗಳ ಹಿಂದೆ ಅಮೆರಿಕ ಎದುರು ರನ್ನರ್‌ ಅಪ್‌ ಆಗಿದ್ದ ಡಚ್‌ ತಂಡ, ಈಗ ಪ್ರಬಲ ತಂಡವಾಗಿ ಹೊರಹೊಮ್ಮುವ ಅವಕಾಶ ಹೊಂದಿದೆ. ಟೋಕಿಯೊ ಒಲಿಂಪಿಕ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲೂ ನೆದರ್ಲೆಂಡ್ಸ್‌ ಓಟಕ್ಕೆ ಅಮೆರಿಕ ತಡೆಯೊಡ್ಡಿತ್ತು. ಅಮೆರಿಕ ಈಗಾಗಲೇ ಹೊರಬಿದ್ದಿದ್ದು, ನೆದರ್ಲೆಂಡ್ಸ್‌ನ ದೊಡ್ಡ ತಡೆಯೊಂದು ನಿವಾರಣೆ ಆಗಿದೆ. ಆದರೆ ಅದು ಸ್ಪೇನ್‌ ಸವಾಲನ್ನು ಎದುರಿಸಬೇಕಾಗಿದೆ. ಸ್ಪೇನ್‌ ಈ ಹಿಂದೆ ಎಂದೂ ಮಹಿಳಾ ವಿಶ್ವಕಪ್‌ ಎಂಟರ ಘಟ್ಟ ತಲುಪಿರಲಿಲ್ಲ. ಆದರೆ ಹಾಲಿ ವಿಶ್ವಕಪ್‌ನಲ್ಲಿ ಸ್ಪೇನ್ ಮಹಿಳೆಯರು ಆಕ್ರಮಣಕಾರಿಯಾಗಿ ಆಡಿದ್ದಾರೆ. ನಾಲ್ಕು ಪಂದ್ಯಗಳಲ್ಲಿ 13 ಗೋಲುಗಳನ್ನು ಬಾರಿಸಿದ್ದಾರೆ. ಜಪಾನ್ ವಿರುದ್ಧ ಲೀಗ್‌ ಹಂತದಲ್ಲಿ ಒಂದು ಸೋಲು ಬಿಟ್ಟರೆ ಉಳಿದಂತೆ ಅದರ ಅಭಿಯಾನದಲ್ಲಿ ಕಳಂಕ ಕಂಡುಬಂದಿಲ್ಲ. ಮೊದಲ ಆರು ವಿಶ್ವಕಪ್‌ ಆವೃತಿಗಳಲ್ಲಿ ಅರ್ಹತೆ ಪಡೆಯಲು ವಿಫಲವಾಗಿದ್ದ ಡಚ್‌ ತಂಡ, 2015ರಲ್ಲಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿತ್ತು, ಮಾತ್ರವಲ್ಲ, ನಾಕೌಟ್‌ಗೂ ತಲುಪಿತ್ತು. ಕಳೆದ ಬಾರಿ (2019) ಫೈನಲ್‌ ತಲುಪಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.