ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌: ಸೆಮಿಫೈನಲ್‌ಗೆ ಸ್ವೀಡನ್, ಸ್ಪೇನ್‌ ಆಕ್ಲೆಂಡ್‌: ಅಮಂಡಾ ಇಲೆಸ್ಟೆಡ್‌ ಮತ್ತು ಫಿಲಿಪಾ ಏಂಜೆಲ್‌ಡಾಲ್ ಅವರ ಗೋಲುಗಳ ನೆರವಿನಿಂದ ಜಪಾನ್‌ ತಂಡವನ್ನು 2–1 ರಿಂದ ಮಣಿಸಿದ ಸ್ವೀಡನ್‌, ಮಹಿಳೆಯರ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿತು. ಆಕ್ಲೆಂಡ್‌ನ ಈಡನ್‌ ಪಾರ್ಕ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದ 32ನೇ ನಿಮಿಷದಲ್ಲಿಸೆಂಟರ್‌ ಬ್ಯಾಕ್‌ ಆಟಗಾರ್ತಿ ಅಮಂಡಾ, ಸ್ವೀಡನ್‌ ತಂಡಕ್ಕೆ ಮೇಲಗೈ ತಂದಿತ್ತರು. ಈ ಟೂರ್ನಿಯಲ್ಲಿ ಅವರು ಗಳಿಸಿದ ನಾಲ್ಕನೇ ಗೋಲು ಇದು. ಎರಡನೇ ಅವಧಿಯಲ್ಲಿ (51) ತಂಡಕ್ಕೆ ಲಭಿಸಿದ ಪೆನಾಲ್ಟಿ ಕಿಕ್ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದ ಫಿಲಿಪಾ ಅವರು ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. ಮರುಹೋರಾಟ ನಡೆಸಿದ ಜಪಾನ್‌ ತಂಡದ ಪರ ಹೊನೊಕ ಹಯಾಶಿ (87) ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು. ಜಪಾನ್‌ ತಂಡಕ್ಕೆ 76ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್‌ ಅವಕಾಶ ಲಭಿಸಿತ್ತು. ಆದರೆ ರಿಕೊ ಉಯೆಕಿ ಒದ್ದ ಚೆಂಡು ಕ್ರಾಸ್‌ಬಾರ್‌ಗೆ ಬಡಿಯಿತು. ರಿಬೌಂಡ್‌ ಆಗಿ ಬಂದ ಚೆಂಡನ್ನು ಹೆಡ್‌ ಮಾಡಿದರೂ, ಗೋಲ್‌ಪೋಸ್ಟ್‌ ಮೇಲಿಂದ ಹೊರಕ್ಕೆ ಹೋಯಿತು. ನಾಲ್ಕನೇ ವಿಶ್ವಕಪ್‌ ಆಡುತ್ತಿರುವ ಸ್ವೀಡನ್‌, ಮೂರನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದೆ. 2011ರ ಚಾಂಪಿಯನ್‌ ಜಪಾನ್‌ ತಂಡದ ನಿರ್ಗಮನದೊಂದಿಗೆ ಈ ಬಾರಿಯ ಟೂರ್ನಿಯಲ್ಲಿ ಹೊಸ ತಂಡಕ್ಕೆ ಪ್ರಶಸ್ತಿ ಲಭಿಸುವುದು ಖಚಿತವಾಗಿದೆ. ಈ ಹಿಂದೆ ಪ್ರಶಸ್ತಿ ಜಯಿಸಿದ್ದ ಅಮೆರಿಕ, ಜರ್ಮನಿ ಮತ್ತು ನಾರ್ವೆ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದವು. 2003ರ ‘ರನ್ನರ್‌ ಅಪ್‌’ ಸ್ವೀಡನ್‌ ತಂಡ ಆ.15 ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಸ್ಪೇನ್‌ ತಂಡವನ್ನು ಎದುರಿಸಲಿದೆ. ವೆಲಿಂಗ್ಟನ್‌ನಲ್ಲಿ ನಡೆದ ದಿನದ ಮತ್ತೊಂದು ಎಂಟರಘಟ್ಟದ ಪಂದ್ಯದಲ್ಲಿ ಸ್ಪೇನ್‌ 2–1 ರಿಂದ ನೆದರ್ಲೆಂಡ್ಸ್‌ ತಂಡವನ್ನು ಮಣಿಸಿ ಇದೇ ಮೊದಲ ಬಾರಿ ಸೆಮಿಫೈನಲ್‌ ಪ್ರವೇಶಿಸಿತು. ಹೆಚ್ಚುವರಿ ಅವಧಿಯಲ್ಲಿ (111ನೇ ನಿಮಿಷ) ಗೋಲು ಗಳಿಸಿದ ಸಲ್ಮಾ ಪರಲುಯೆಲೊ ಅವರು ಸ್ಪೇನ್‌ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಜಿದ್ದಾಜಿದ್ದಿನ ಸೆಣಸಾಟ ನಡೆದ ಪಂದ್ಯದ 81ನೇ ನಿಮಿಷದಲ್ಲಿ ಮರಿಯೋನಾ ಕಾಲ್ಡೆಂಟಿ ಅವರು ಸ್ಪೇನ್‌ಗೆ ಮುನ್ನಡೆ ತಂದಿತ್ತಿದ್ದರು. ಆದರೆ ನೆದರ್ಲೆಂಡ್ಸ್‌ ತಂಡದ ಸ್ಟೆಫಾನಿ ವಾನ್‌ ರೆಡ್‌ ಗ್ರಾಟ್‌ ಅವರು ಇಂಜುರಿ ಅವಧಿಯಲ್ಲಿ (90+1) ಗೋಲು ಗಳಿಸಿ ಪಂದ್ಯವನ್ನು ಸಮಸ್ಥಿತಿಗೆ ತಂದರು. ಇದರಿಂದ ಹೆಚ್ಚುವರಿ ಅವಧಿಯ ಮೊರೆ ಹೋಗಲಾಯಿತು. 19 ವರ್ಷದ ಸಲ್ಮಾ ಅವರು ಏಕಾಂಗಿಯಾಗಿ ಚೆಂಡಿನೊಂದಿಗೆ ಮುನ್ನುಗ್ಗಿ ಅಮೋಘ ರೀತಿಯಲ್ಲಿ ಗುರಿ ಸೇರಿಸಿ ಸ್ಪೇನ್‌ ಬಳಗದಲ್ಲಿ ಹರ್ಷಕ್ಕೆ ಕಾರಣರಾದರು. ಸಲ್ಮಾ ಅವರು ಒಂಬತ್ತು ತಿಂಗಳ ಹಿಂದೆಯಷ್ಟೇ ಸ್ಪೇನ್‌ ಸೀನಿಯರ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಕಳೆದ ವರ್ಷ ನಡೆದಿದ್ದ 20 ವರ್ಷದೊಳಗಿನವರ ವಿಶ್ವಕಪ್‌ ಫೈನಲ್‌ನಲ್ಲಿ ಅವರು ಜಪಾನ್‌ ವಿರುದ್ಧ ಎರಡು ಗೋಲು ಗಳಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.