ಸ್ಯಾಫ್ ಫುಟ್‌ಬಾಲ್‌ | ಚೆಟ್ರಿ ಹ್ಯಾಟ್ರಿಕ್ ಗೋಲು; ಪಾಕ್ ಎದುರು ಭಾರತಕ್ಕೆ ಅಮೋಘ ಜಯ ಬೆಂಗಳೂರು: ನಾಯಕ ಸುನಿಲ್‌ ಚೆಟ್ರಿ ಅವರ ಹ್ಯಾಟ್ರಿಕ್ ಗೋಲುಗಳ ಬಲದಿಂದ ಭಾರತ ತಂಡ ಸ್ಯಾಫ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯೆಡೆಗಿನ ಅಭಿಯಾನವನ್ನು ಭರ್ಜರಿಯಾಗಿಯೇ ಆರಂಭಿಸಿತು. ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ಕಿಕ್ಕಿರಿದಿದ್ದ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದ ಪಂದ್ಯದಲ್ಲಿ ಆತಿಥೇಯರು 4-0 ಗೋಲುಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿದರು. 10ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದ ಚೆಟ್ರಿ, 14 ಮತ್ತು 74 ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಮತ್ತೊಂದು ಗೋಲನ್ನು ಉದಾಂತ ಸಿಂಗ್ (81ನೇ ನಿ.) ತಂದಿತ್ತರು. ಪಾಕ್‌ ತಂಡಕ್ಕೆ ಗೋಲಿನ ಖಾತೆ ತೆರೆಯಲು ಆಗಲಿಲ್ಲ. ಸುದೀರ್ಘ ಪ್ರಯಾಣದಿಂದ ಬಸವಳಿದಿದ್ದ ಪಾಕ್ ತಂಡದ ಆಟಗಾರರು, ವಿಶ್ರಾಂತಿ ಪಡೆಯದೆಯೇ ಕಣಕ್ಕಿಳಿದಿದ್ದರು. ಭಾರತ ತಂಡದ ಸೊಗಸಾದ ಆಟಕ್ಕೆ ತಕ್ಕ ಪೈಪೋಟಿ ಒಡ್ಡದೆಯೇ ಶರಣಾದರು. ಆಕರ್ಷಕ ಡ್ರಿಬ್ಲಿಂಗ್‌, ನಿಖರ ಪಾಸ್‌ಗಳು ಮತ್ತು ರಕ್ಷಣಾ ವಿಭಾಗದಲ್ಲಿ ಛಲದ ಆಟವಾಡಿದ ಭಾರತದ ಆಟಗಾರರು ಅರ್ಹ ಗೆಲುವು ತಮ್ಮದಾಗಿಸಿಕೊಂಡರು. 10 ನಿಮಿಷ ಆಗುವಷ್ಟರಲ್ಲೇ ಗೋಲು ಗಳಿಸಿದ್ದು ಭಾರತದ ಉತ್ಸಾಹ ಇಮ್ಮಡಿಗೊಳಿಸಿತು. ಪಾಕ್ ಗೋಲ್‌ಕೀಪರ್‌ ಚೆಂಡನ್ನು ಹಿಡಿತಕ್ಕೆ ಪಡೆಯಲು ವಿಫಲವಾದಾಗ ಚೆಟ್ರಿ ಸುಲಭವಾಗಿ ಗುರಿ ಸೇರಿಸಿದರು. ಅದಾದ ಬಳಿಕ ಭಾರತಕ್ಕೆ ದೊರೆತ ಎರಡೂ ಪೆನಾಲ್ಟಿ ಕಿಕ್‌ ಅವಕಾಶಗಳನ್ನು ಚೆಟ್ರಿ ಗೋಲಾಗಿ ಪರಿವರ್ತಿಸಿದರು. ಈ ಮೂಲಕ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಗೋಲುಗಳ ಸಂಖ್ಯೆಯನ್ನು 90ಕ್ಕೆ ಹೆಚ್ಚಿಸಿಕೊಂಡರು. ಇರಾನ್‌ನ ಅಲಿ ದಾಯಿ (109 ಗೋಲು) ಬಳಿಕ ಅತಿಹೆಚ್ಚು ಗೋಲುಗಳನ್ನು ಗಳಿಸಿದ ಏಷ್ಯಾದ ಎರಡನೇ ಆಟಗಾರ ಎನಿಸಿಕೊಂಡರು. ಪಾಕ್ ಸ್ಟ್ರೈಕರ್‌ಗಳಾದ ಹಸನ್ ಬಶೀರ್, ಹಾರುನ್ ಹಮೀದ್ ಮತ್ತು ಆತಿಸ್ ಖಾನ್ ಅವರನ್ನು ಕಟ್ಟಿಹಾಕಲು ಸಂದೇಶ್‌ ಜಿಂಘಾನ್‌ ಒಳಗೊಂಡ ಭಾರತದ ಡಿಫೆಂಡರ್‌ಗಳು ಯಶಸ್ವಿಯಾದರು. 2018ರ ಬಳಿಕ ಭಾರತ– ಪಾಕಿಸ್ತಾನ ಫುಟ್‌ಬಾಲ್‌ ತಂಡಗಳು ಇದೇ ಮೊದಲ ಬಾರಿ ಎದುರಾಗಿತ್ತು. ಅಂದು ನಡೆದಿದ್ದ ಸ್ಯಾಫ್‌ ಟೂರ್ನಿಯ ಪಂದ್ಯವನ್ನು ಭಾರತ 3–1 ರಿಂದ ಜಯಿಸಿತ್ತು. ಮಳೆಯಲ್ಲೇ ಆಟ: ಪಂದ್ಯ ಆರಂಭವಾಗುತ್ತಿದ್ದಂತೆಯೇ ತುಂತುರು ಮಳೆಯೂ ಶುರುವಾಯಿತು. 37 ನೇ ನಿಮಿಷ ಆದಾಗ ಜೋರು ಸುರಿಯಲಾರಂಭಿಸಿತು.‌ ಇದರಿಂದ ಆಟದ ವೇಗ ತಗ್ಗಿತು. ಎರಡನೇ ಅವಧಿಯಲ್ಲೂ ಮಳೆ ಮುಂದುವರಿಯಿತು.‌ ಚೆಂಡಿನ‌ ಮೇಲೆ ನಿಯಂತ್ರಣ ಸಾಧಿಸಲು ಎರಡೂ ತಂಡಗಳ ಆಟಗಾರರು ಹರಸಾಹಸಪಟ್ಟರು. ಕುವೈತ್‌ಗೆ ಗೆಲುವು: ಬುಧವಾರ ಮಧ್ಯಾಹ್ನ ನಡೆದ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕುವೈತ್‌ 3–1 ಗೋಲುಗಳಿಂದ ನೇಪಾಳ ತಂಡವನ್ನು ಮಣಿಸಿತು. ಖಾಲಿದ್‌ ಎಲ್‌ ಇಬ್ರಾಹಿಂ (23ನೇ ನಿ.), ಶಬೀಬ್‌ ಅಲ್‌ ಖಾಲ್ದಿ (41ನೇ ನಿ.), ಮೊಹಮ್ಮದ್‌ ಅಬ್ದುಲ್ಲಾ ದಹಾಂ (65ನೇ ನಿ.) ಅವರು ಕುವೈತ್ ಪರ ಚೆಂಡನ್ನು ಗುರಿ ಸೇರಿಸಿದರೆ, ನೇಪಾಳ ತಂಡದ ಏಕೈಕ ಗೋಲನ್ನು ಅಂಜನ್‌ ಬಿಸ್ಟಾ (68) ಗಳಿಸಿದರು. ಇಂದಿನ ಪಂದ್ಯಗಳು ಲೆಬನಾನ್‌– ಬಾಂಗ್ಲಾದೇಶ (ಮಧ್ಯಾಹ್ನ 3.30) ಮಾಲ್ಡೀವ್ಸ್‌– ಭೂತಾನ್ (ರಾತ್ರಿ 7.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.