ಡುರಾಂಡ್‌ ಕಪ್‌ ಟೂರ್ನಿ: ಜೆಮ್‌ಶೆಡ್‌ಪುರ ವಿರುದ್ಧ ಮುಂಬೈ ಸಿಟಿಗೆ ಜಯ ಕೋಲ್ಕತ್ತ: ಮುಂಬೈ ಸಿಟಿ ಎಫ್‌.ಸಿ ತಂಡದವರು ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಜೆಮ್‌ಶೆಡ್‌ಪುರ ಎಫ್‌.ಸಿ ತಂಡವನ್ನು 5–0ಯಿಂದ ಮಣಿಸಿ ಸತತ ಎರಡನೇ ಗೆಲುವು ದಾಖಲಿಸಿದರು. ಮಂಗಳವಾರ ನಡೆದ ಪಂದ್ಯದಲ್ಲಿ ಜಾರ್ಜ್‌ ಪೆರೇರಾ ಡಯಾಜ್ 7ನೇ ಮತ್ತು 14ನೇ ನಿಮಿಷ ಗೋಲು ಗಳಿಸಿ ಮುಂಬೈ ತಂಡಕ್ಕೆ ಮುನ್ನಡೆ ತಂದಿತ್ತರು. ನಂತರ ಆಲ್ಬರ್ಟೊ ನೊಗುಯೆರಾ (40ನೇ), ಯೊಯೆಲ್ ವ್ಯಾನ್ ನಿಫ್ (47ನೇ) ಮತ್ತು ವಿಕ್ರಮ್‌ ಪ್ರತಾಪ್‌ ಸಿಂಗ್‌ (54) ಅವರು ಗೆಲುವಿನ ಅಂತರ ಹೆಚ್ಚಿಸಿದರು. ಗೋವಾಕ್ಕೆ ಜಯ: ಗುವಾಹಟಿಯಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ನೋಹ್ ಸದೌಯಿ ಅವರ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ಎಫ್‌.ಸಿ ಗೋವಾ ತಂಡವು 6–0ಯಿಂದ ಶಿಲ್ಲಾಂಗ್ ಲಾಜೊಂಗ್ ತಂಡವನ್ನು ಮಣಿಸಿತು. ಗೋವಾ ತಂಡದ ಪರ ರೌಲಿನ್ ಬೋರ್ಗೆಸ್ 15ನೇ ನಿಮಿಷದಲ್ಲಿ ಗೋಲಿನ ಖಾತೆಯನ್ನು ತೆರೆದರೆ, ನೋಹ್ ಸದೌಯಿ (20, 26, 86ನೇ), ವಿಕ್ಟರ್ ರಾಡ್ರಿಗಸ್ (68ನೇ), ಕಾರ್ಲೋಸ್ ಮಾರ್ಟಿನೆಜ್ (83ನೇ) ಚೆಂಡನ್ನು ಗುರಿ ಸೇರಿಸಿದರು. ಈ ಮೂಲಕ ಶಿಲ್ಲಾಂಗ್ ತಂಡ ಸತತ ಎರಡನೇ ಸೋಲು ಅನುಭವಿಸಿತು. ಬುಧವಾರ ನಡೆಯುವ ಪಂದ್ಯಗಳಲ್ಲಿ ಡೆಲ್ಲಿ ಎಫ್‌.ಸಿ ತಂಡವು ನೇಪಾಳ ತ್ರಿಭುವನ್ ಆರ್ಮಿ ತಂಡವನ್ನು ಹಾಗೂ ಗೋಕುಲಂ ಕೇರಳ ಎಫ್‌.ಸಿ ತಂಡವು ಇಂಡಿಯನ್‌ ಏರ್‌ಫೋರ್ಸ್‌ ಎಫ್‌ಟಿ ತಂಡವನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.