ಸ್ಯಾಫ್‌ ಚಾಂಪಿಯನ್‌ಷಿಪ್‌| ಭಾರತಕ್ಕೆ ಇಂದು ನೇಪಾಳ ಸವಾಲು ಬೆಂಗಳೂರು: ಪಾಕಿಸ್ತಾನದ ವಿರುದ್ದ ದೊರೆತ ಭರ್ಜರಿ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಭಾರತ ತಂಡದವರು ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಎರಡನೇ ಪಂದ್ಯದಲ್ಲಿ ಶನಿವಾರ, ನೇಪಾಳ ವಿರುದ್ಧ ಹಣಾಹಣಿ ನಡೆಸಲಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಪಂದ್ಯದಲ್ಲಿ ಸುನಿಲ್ ಚೆಟ್ರಿ ಬಳಗ 4–0 ಗೋಲುಗಳಿಂದ ಪಾಕ್‌ ತಂಡವನ್ನು ಮಣಿಸಿತ್ತು. ನೇಪಾಳ ವಿರುದ್ಧ ಗೆದ್ದರೆ, ಸೆಮಿಫೈನಲ್‌ನತ್ತ ಮತ್ತೊಂದು ಹೆಜ್ಜೆ ಇಡಲಿದೆ. ‘ಎ’ ಗುಂಪಿನಲ್ಲಿ ಭಾರತ ಮತ್ತು ಕುವೈತ್‌ ಒಂದು ಪಂದ್ಯ ಗೆದ್ದಿದ್ದು, ತಲಾ ಮೂರು ಪಾಯಿಂಟ್ಸ್‌ ಹೊಂದಿವೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಾಯಕ ಚೆಟ್ರಿ, ಹ್ಯಾಟ್ರಿಕ್‌ ಗೋಲು ಗಳಿಸಿ ಮಿಂಚಿದ್ದರು. ಆಕ್ರಮಣ ಮತ್ತು ರಕ್ಷಣೆಯಲ್ಲಿ ಆತಿಥೇಯ ತಂಡ ಉತ್ತಮ ಆಟವಾಡಿತ್ತು. ನೇಪಾಳ ವಿರುದ್ಧವೂ ಅದೇ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿ ಆಟಗಾರರು ಇದ್ದಾರೆ. ಲಾಲ್‌ಲಿಯಾನ್‌ಜುವಾಲ ಚಾಂಗ್ಟೆ ಮತ್ತು ಆಶಿಖ್ ಕುರುಣಿಯನ್‌ ಮೊದಲ ಪಂದ್ಯದಲ್ಲಿ ಚೆಟ್ರಿಗೆ ತಕ್ಕ ಸಾಥ್‌ ನೀಡಿದ್ದರು. ಎರಡನೇ ಅವಧಿಯಲ್ಲಿ ಬದಲಿ ಆಟಗಾರನಾಗಿ ಬಂದು ಗೋಲು ಗಳಿಸಿದ್ದ ಉದಾಂತ ಸಿಂಗ್ ಕೂಡಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ತಾನಾಡಿದ ಕೊನೆಯ ಏಳು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ, ಒಟ್ಟು 12 ಗೋಲುಗಳನ್ನು ಗಳಿಸಿದೆ. ಆದರೆ ಎದುರಾಳಿಗಳಿಗೆ ಒಂದೂ ಗೋಲು ಗೋಲು ಬಿಟ್ಟುಕೊಟ್ಟಿಲ್ಲ. ರಕ್ಷಣಾ ವಿಭಾಗದ ಬಲ ಹೆಚ್ಚಿರುವುದಕ್ಕೆ ಇದು ಸಾಕ್ಷಿ. ಡಿಫೆಂಡರ್‌ಗಳಾದ ಸಂದೇಶ್‌ ಜಿಂಘಾನ್‌, ಅಮರಿಂದರ್‌ ಮತ್ತು ಅನ್ವರ್‌ ಅಲಿ ಅವರು ರಕ್ಷಣಾ ವಿಭಾಗಕ್ಕೆ ಬಲ ತುಂಬಿದ್ದಾರೆ. ಮೊದಲ ಪಂದ್ಯದಲ್ಲಿ ಕುವೈತ್‌ ಕೈಯಲ್ಲಿ 1–3 ಗೋಲುಗಳಿಂದ ಸೋತಿದ್ದ ನೇಪಾಳ ತಂಡ ಪುಟಿದೇಳುವ ಪ್ರಯತ್ನದಲ್ಲಿದೆ. ಆದ್ದರಿಂದ ಚೆಟ್ರಿ ಬಳಗ, ಎದುರಾಳಿಗಳನ್ನು ಹಗುರವಾಗಿ ಕಾಣಲು ಸಿದ್ಧವಿಲ್ಲ. ಸ್ಟಿಮ್ಯಾಚ್‌ ಅಲಭ್ಯ: ಈ ಪಂದ್ಯದ ವೇಳೆ ಭಾರತ ತಂಡಕ್ಕೆ ಮುಖ್ಯ ಕೋಚ್‌ ಇಗೊರ್‌ ಸ್ಟಿಮ್ಯಾಚ್‌ ಅವರ ಮಾರ್ಗದರ್ಶನ ದೊರೆಯುತ್ತಿಲ್ಲ. ಪಾಕ್‌ ವಿರುದ್ಧದ ಪಂದ್ಯದಲ್ಲಿ ರೆಡ್‌ ಕಾರ್ಡ್‌ ಪಡೆದಿದ್ದರಿಂದ ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಿದ್ಧಾರೆ. ಅವರ ಅನುಪಸ್ಥಿತಿಯಲ್ಲಿ ಸಹಾಯಕ ಕೋಚ್ ಮಹೇಶ್‌ ಗಾವ್ಳಿ, ಡಗ್‌ಔಟ್‌ ಬಳಿ ನಿಂತು ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಬಲಾಬಲ: ಭಾರತ ತಂಡ ನೇಪಾಳದ ವಿರುದ್ದ 16–2ರ ಗೆಲುವಿನ ದಾಖಲೆ ಹೊಂದಿದೆ. ಉಭಯ ತಂಡಗಳು ಒಟ್ಟು 23 ಬಾರಿ ಎದುರಾಗಿದ್ದು, ಐದು ಪಂದ್ಯಗಳು ಡ್ರಾ ಆಗಿವೆ. 2021ರ ಸ್ಯಾಫ್‌ ಚಾಂಪಿಯನ್‌ಷಿಪ್‌ನಲ್ಲಿ ಪೈಪೋಟಿ ನಡೆಸಿದ್ದಾಗ, ಭಾರತ 3–0 ರಿಂದ ಗೆದ್ದಿತ್ತು. ಇಂದಿನ ಪಂದ್ಯಗಳು ಪಾಕಿಸ್ತಾನ – ಕುವೈತ್ (ಮಧ್ಯಾಹ್ನ 3.30) ಭಾರತ– ನೇಪಾಳ (ರಾತ್ರಿ 7.30) ಬೆಂಗಳೂರು (ಪಿಟಿಐ): ಪಾಕಿಸ್ತಾನ ವಿರುದ್ದದ ಪಂದ್ಯದ ವೇಳೆ ಅಶಿಸ್ತು ತೋರಿ ರೆಡ್‌ ಕಾರ್ಡ್‌ ಪಡೆದಿದ್ದ ಭಾರತ ತಂಡದ ಕೋಚ್‌ ಇಗೊರ್‌ ಸ್ಟಿಮ್ಯಾಚ್ ಅವರು ಹೆಚ್ಚಿನ ಪಂದ್ಯಗಳ ನಿಷೇಧಕ್ಕೆ ಒಳಗಾಗುವ ಅಪಾಯದಿಂದ ಪಾರಾಗಿದ್ದಾರೆ. ರೆಡ್‌ ಕಾರ್ಡ್‌ ಪಡೆದವರು ಒಂದು ಪಂದ್ಯದ ನಿಷೇಧಕ್ಕೆ ಒಳಗಾಗುವರು. ಗಂಭೀರ ಸ್ವರೂಪದ ತಪ್ಪು ಮಾಡಿದ್ದರೆ ಒಂದಕ್ಕಿಂತ ಹೆಚ್ಚಿನ ಪಂದ್ಯಗಳ ನಿಷೇಧಕ್ಕೆ ಒಳಗಾಗುವರು. ‘ಸ್ಟಿಮ್ಯಾಚ್‌ ಮಾಡಿರುವ ತಪ್ಪು ಒಂದಕ್ಕಿಂತ ಹೆಚ್ಚಿನ ಪಂದ್ಯಗಳ ನಿಷೇಧ ಹೇರುವಷ್ಟು ಗಂಭೀರವಾದುದಲ್ಲ. ಪಂದ್ಯದ ರೆಫರಿ ಅವರ ವಿರುದ್ಧ ನೀಡಿರುವ ವರದಿಯನ್ನು ಸ್ಯಾಫ್‌ ಶಿಸ್ತು ಸಮಿತಿಯ ಮುಂದೆ ಇಡುವುದಿಲ್ಲ’ ಎಂದು ದಕ್ಷಿಣ ಏಷ್ಯಾ ಫುಟ್‌ಬಾಲ್‌ ಫಡರೇಷನ್‌ ಪ್ರಧಾನ ಕಾರ್ಯದರ್ಶಿ ಅನ್ವರುಲ್‌ ಹಕ್ ತಿಳಿಸಿದ್ದಾರೆ. ‍ಪಾಕ್‌ ಆಟಗಾರ ‘ಥ್ರೋ ಇನ್‌’ ಮಾಡಲು ಮುಂದಾದಾಗ ಚೆಂಡನ್ನು ಕಸಿದುಕೊಂಡದ್ದಕ್ಕೆ ಸ್ಟಿಮ್ಯಾಚ್‌ಗೆ ರೆಡ್‌ ಕಾರ್ಡ್‌ ನೀಡಲಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.