ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಬಾಂಗ್ಲಾದೇಶಕ್ಕೆ ಗೆಲುವು ಬೆಂಗಳೂರು: ಬಾಂಗ್ಲಾದೇಶ ತಂಡದವರು ಭಾನುವಾರ ನಡೆದ ಪಂದ್ಯದಲ್ಲಿ ಮಾಲ್ಡೀವ್ಸ್‌ ವಿರುದ್ಧ ಗೆದ್ದು, ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಂಡರು. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಪಂದ್ಯವನ್ನು ಬಾಂಗ್ಲಾದೇಶ 3–1 ಗೋಲುಗಳಿಂದ ಜಯಿಸಿತು. ಹಮ್ಜಾ ಮೊಹಮ್ಮದ್‌ ಅವರು 17ನೇ ನಿಮಿಷದಲ್ಲಿ ಮಾಲ್ಡೀವ್ಸ್‌ ತಂಡಕ್ಕೆ ಮುನ್ನಡೆ ತಂದಿತ್ತರೂ, ಬಾಂಗ್ಲಾ ತಂಡ ತಿರುಗೇಟು ನೀಡಿತು. ರಕೀಬ್‌ ಹೊಸೇನ್‌ (42), ತಾರಿಖ್‌ ಕಾಜಿ (67) ಹಾಗೂ ಶೇಕ್‌ ಮೊರ್ಸಲಿನ್ (90) ಅವರು ಗೋಲು ಗಳಿಸಿ ಗೆಲುವಿಗೆ ಕಾರಣರಾದರು. ಎರಡು ಪಂದ್ಯಗಳನ್ನು ಆಡಿರುವ ಬಾಂಗ್ಲಾದೇಶ ಮತ್ತು ಮಾಲ್ಡೀವ್ಸ್‌ ತಂಡಗಳು ತಲಾ ಮೂರು ಪಾಯಿಂಟ್ಸ್ ಹೊಂದಿವೆ. ಜೂನ್‌ 28 ರಂದು ನಡೆಯಲಿರುವ ಕೊನೆಯ ಲೀಗ್‌ ಪಂದ್ಯದಲ್ಲಿ ಇವೆರಡು ತಂಡಗಳು ಕ್ರಮವಾಗಿ ಲೆಬನಾನ್‌ ಹಾಗೂ ಭೂತಾನ್‌ ತಂಡಗಳನ್ನು ಎದುರಿಸಲಿವೆ. ಸೆಮಿಫೈನಲ್‌ ಪ್ರವೇಶಿಸಬೇಕಾದರೆ ಉಭಯ ತಂಡಗಳಿಗೂ ಕೊನೆಯ ಪಂದ್ಯದಲ್ಲಿ ದೊಡ್ಡ ಅಂತರದ ಗೆಲುವು ಅನಿವಾರ್ಯ. ‘ಮಾಡು–ಮಡಿ’ ಪಂದ್ಯದ ಆರಂಭದ ನಿಮಿಷಗಳಲ್ಲಿ ಬಾಂಗ್ಲಾ ತಂಡ, ನಿಧಾನಗತಿ ಆಟದ ಮೊರೆಹೋಯಿತು. ಗೋಲು ಗಳಿಸುವ ಗಂಭೀರ ಪ್ರಯತ್ನ ಮಾಡಲಿಲ್ಲ. ಇದರ ಲಾಭ ಪಡೆದ ಮಾಲ್ಡೀವ್ಸ್‌ 17ನೇ ನಿಮಿಷದಲ್ಲಿ ಮುನ್ನಡೆ ಗಳಿಸಿತು. ಈ ಹಿನ್ನಡೆಯು ಬಾಂಗ್ಲಾ ಆಟಗಾರರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿತು. ಅದುವರೆಗೂ ರಕ್ಷಣೆಗೆ ಒತ್ತು ನೀಡಿದ್ದ ತಂಡ, ಆಕ್ರಮಣಕಾರಿ ಆಟ ಹೊರಹಾಕಿತು. ಮೊದಲಾರ್ಧ ಕೊನೆಗೊಳ್ಳಲು ಕೆಲವೇ ನಿಮಿಷಗಳಿದ್ದಾಗ, ಅನುಭವಿ ಆಟಗಾರ ರಕೀಬ್‌ ನೆರವಿನಿಂದ ಸಮಬಲ ಸಾಧಿಸಿತು. ಫ್ರೀಕಿಕ್‌ನಲ್ಲಿ ದೊರೆತ ಚೆಂಡನ್ನು ಹೆಡ್‌ ಮಾಡುವ ಮೂಲಕ ಎದುರಾಳಿ ಗೋಲ್‌ಕೀಪರ್‌ ಹುಸೈನ್‌ ಶರೀಫ್‌ ಅವರನ್ನು ತಪ್ಪಿಸಲು ಯಶಸ್ವಿಯಾದರು. ದ್ವಿತೀಯಾರ್ಧದಲ್ಲೂ ಅದೇ ಲಯವನ್ನು ಮುಂದುವರಿಸಿದ ಬಾಂಗ್ಲಾದೇಶ, ಮತ್ತೆರಡು ಗೋಲುಗಳನ್ನು ಗಳಿಸಿ ಪೂರ್ಣ ಮೂರು ಪಾಯಿಂಟ್ಸ್‌ ಕಲೆಹಾಕಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.