ಸ್ಯಾಫ್‌ ಫುಟ್‌ಬಾಲ್‌: ಭಾರತಕ್ಕೆ ಹ್ಯಾಟ್ರಿಕ್‌ ಜಯದ ನಿರೀಕ್ಷೆ, ಅಗ್ರಸ್ಥಾನದತ್ತ ಚಿತ್ತ ಬೆಂಗಳೂರು: ಸೆಮಿಫೈನಲ್‌ನಲ್ಲಿ ಈಗಾಗಲೇ ಸ್ಥಾನ ಪಡೆದಿರುವ ಭಾರತ ಮತ್ತು ಕುವೈತ್‌ ತಂಡಗಳು ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಮಂಗಳವಾರ ಎದುರಾಗಲಿದ್ದು, ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. ಉಭಯ ತಂಡಗಳು ತಲಾ ಆರು ಪಾಯಿಂಟ್ಸ್‌ ಕಲೆಹಾಕಿದ್ದು, ‘ಎ’ ಗುಂಪಿನಿಂದ ನಾಕೌಟ್‌ ಹಂತದಲ್ಲಿ ಸ್ಥಾನ ಪಡೆದುಕೊಂಡಿವೆ. ಉತ್ತಮ ಗೋಲು ವ್ಯತ್ಯಾಸದಲ್ಲಿ ಕುವೈತ್‌ ಅಗ್ರಸ್ಥಾನದಲ್ಲಿದ್ದು, ಆತಿಥೇಯ ತಂಡ ಎರಡನೇ ಸ್ಥಾನದಲ್ಲಿದೆ. ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯುವ ಪಂದ್ಯ ಗೆದ್ದು, ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವುದು ಸುನಿಲ್‌ ಚೆಟ್ರಿ ಬಳಗದ ಗುರಿ. ಹಾಗಾದಲ್ಲಿ ಜುಲೈ 1 ರಂದು ನಡೆಯುವ ಸೆಮಿಫೈನಲ್‌ನಲ್ಲಿ ಬಲಿಷ್ಠ ಲೆಬನಾನ್‌ ತಂಡವನ್ನು ಎದುರಿಸುವ ಸಂಕಷ್ಟ ತಪ್ಪಲಿದೆ. ಲೆಬನಾನ್‌ ತಂಡ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡವನ್ನು ಸೆಮಿಫೈನಲ್‌ನಲ್ಲಿ ಎದುರಿಸಲಿದೆ. ಬಾಂಗ್ಲಾದೇಶ ಅಥವಾ ಮಾಲ್ಡೀವ್ಸ್‌ ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ಸಾಧ್ಯತೆಯಿದೆ. ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಪಾಕಿಸ್ತಾನ ಮತ್ತು ನೇಪಾಳ ತಂಡಗಳನ್ನು 4–0 ಹಾಗೂ 2–0 ರಲ್ಲಿ ಮಣಿಸಿರುವ ಭಾರತ, ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲ್ಲಿದೆ. ಚೆಟ್ರಿ ಬಳಗ ಎದುರಾಳಿಗಳಿಗೆ ಒಂದೂ ಗೋಲು ಬಿಟ್ಟುಕೊಟ್ಟಿಲ್ಲ. ಡಿಫೆಂಡರ್‌ಗಳು ಅತ್ಯುತ್ತಮ ಫಾರ್ಮ್‌ನಲ್ಲಿದ್ಧಾರೆ. ಆದರೆ ಫಿಫಾ ರ್‍ಯಾಂಕಿಂಗ್‌ನಲ್ಲಿ 143ನೇ ಸ್ಥಾನದಲ್ಲಿರುವ ಕುವೈತ್‌ ತಂಡ ಟೂರ್ನಿಯಲ್ಲಿ ಶಿಸ್ತಿನ ಆಟವಾಡಿದ್ದು, ಭಾರತಕ್ಕೆ ಪ್ರಬಲ ಪೈಪೋಟಿ ಒಡ್ಡುವುದರಲ್ಲಿ ಎರಡು ಮಾತಿಲ್ಲ. ನೇಪಾಳ ಎದುರಿನ ಪಂದ್ಯದಲ್ಲಿ ಗೋಲಿನ ಖಾತೆ ತೆರೆಯಲು ಭಾರತಕ್ಕೆ ಒಂದು ಗಂಟೆ ಪರಿಶ್ರಮ ಪಡಬೇಕಾಗಿತ್ತು. ನೇಪಾಳಕ್ಕೆ ಹೋಲಿಕೆ ಮಾಡಿದರೆ, ಕುವೈತ್‌ ತಂಡದ ರಕ್ಷಣಾ ವಿಭಾಗ ಇನ್ನಷ್ಟು ಬಲಿಷ್ಠವಾಗಿದೆ. ಆದ್ದರಿಂದ ಚೆಟ್ರಿ ಬಳಗ ತನ್ನ ಆಟದ ವೇಗ ಮತ್ತು ಆಕ್ರಮಣವನ್ನು ಹೆಚ್ಚಿಸುವುದು ಅನಿವಾರ್ಯ. ಆತಿಥೇಯ ತಂಡವು ಚೆಟ್ರಿ ಅವರನ್ನು ಅತಿಯಾಗಿ ಅವಲಂಬಿಸಿದೆ ಎಂಬುದು ಮೊದಲ ಎರಡು ಪಂದ್ಯಗಳಲ್ಲಿ ಸಾಬೀತಾಗಿದೆ. ಪಾಕಿಸ್ತಾನದ ವಿರುದ್ಧ ಹ್ಯಾಟ್ರಿಕ್‌ ಗಳಿಸಿದ್ದ ಅವರು ನೇಪಾಳ ಎದುರೂ ಗೋಲು ಗಳಿಸಿದ್ದರು. ಕುವೈತ್‌ ಡಿಫೆಂಡರ್‌ಗಳು ಚೆಟ್ರಿ ಅವರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರೆ, ಪರಿಸ್ಥಿತಿಗೆ ತಕ್ಕಂತೆ ಆಟವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಇತರರು ಮುಂದಾಗುವುದು ಅಗತ್ಯ. ಸಹಲ್‌ ಅಬ್ದುಲ್‌ ಸಮದ್‌, ಚಾಂಗ್ಟೆ ಮತ್ತು ಮಹೇಶ್‌ ಸಿಂಗ್‌ ಕಾಲ್ಚಳಕ ತೋರುವುದು ಅನಿವಾರ್ಯ. ಒಂದು ಪಂದ್ಯದ ನಿಷೇಧ ಶಿಕ್ಷೆ ಪೂರೈಸಿರುವ ಕೋಚ್‌ ಇಗೋರ್‌ ಸ್ಟಿಮ್ಯಾಚ್‌ ಅವರ ಮಾರ್ಗದರ್ಶನವು ಈ ಪಂದ್ಯದ ವೇಳೆ ಲಭಿಸಲಿರುವುದು ಭಾರತದ ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮಂಗಳವಾರ ಮಧ್ಯಾಹ್ನ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ– ನೇಪಾಳ ತಂಡಗಳು ಎದುರಾಗಲಿವೆ. ಆಡಿರುವ ಎರಡೂ ಪಂದ್ಯಗಳನ್ನು ಸೋತಿರುವ ಉಭಯ ತಂಡಗಳು ಸೆಮಿ ‘ರೇಸ್‌’ನಿಂದ ಈಗಾಗಲೇ ಹೊರಬಿದ್ದಿವೆ. ಇಂದಿನ ಪಂದ್ಯಗಳು ಪಾಕಿಸ್ತಾನ– ನೇಪಾಳ (ಮಧ್ಯಾಹ್ನ 3.30) ಭಾರತ– ಕುವೈತ್ (ರಾತ್ರಿ 7.30) ನೇರ ಪ್ರಸಾರ: ಫ್ಯಾನ್‌ಕೋಡ್‌ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.