ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿ: ಸ್ಪೇನ್‌, ಸ್ವಿಟ್ಜರ್‌ಲೆಂಡ್‌ಗೆ ಗೆಲುವು ವೆಲಿಂಗ್ಟನ್ (ಎಎಫ್‌ಪಿ/ಎಪಿ): ಸ್ಪೇನ್‌ ಮತ್ತು ಸ್ವಿಟ್ಜರ್‌ಲೆಂಡ್‌ ತಂಡಗಳು ಇಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದವು. ವೆಲಿಂಗ್ಟನ್‌ನಲ್ಲಿ ಶುಕ್ರವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಸ್ಪೇನ್ 3–0 ಗೋಲುಗಳಿಂದ ಕೋಸ್ಟರಿಕಾ ತಂಡವನ್ನು ಮಣಿಸಿತು. 21ನೇ ನಿಮಿಷದಲ್ಲಿ ಕೋಸ್ಟರಿಕಾ ಡಿಫೆಂಡರ್‌ ವಲೇರಿಯಾ ಡೆಲ್‌ ಕ್ಯಾಂಪೊ ಅವರು ಎದುರಾಳಿಗಳಿಗೆ ‘ಉಡುಗೊರೆ’ ಗೋಲು ನೀಡಿದರು. ಐತಾನಾ ಬೋನ್‌ಮತಿ ಅವರು 23ನೇ ನಿಮಿಷದಲ್ಲಿ ಸ್ಪೇನ್‌ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. ತಂಡದ ಮೂರನೇ ಗೋಲನ್ನು ಎಸ್ತೆರ್‌ ಗೊನ್ಸಾಲೆಸ್ 27ನೇ ನಿಮಿಷದಲ್ಲಿ ತಂದಿತ್ತರು. ಸ್ಪೇನ್‌ ತಂಡದವರು ಆ ಬಳಿಕ ಎದುರಾಳಿ ಗೋಲು ವಲಯ ಗುರಿಯಾಗಿಸಿ ಹಲವು ಸಲ ಚೆಂಡಿನೊಂದಿಗೆ ಮುನ್ನುಗ್ಗಿದರೂ, ಗುರಿ ಸೇರಿಸಲು ಆಗಲಿಲ್ಲ. ಸ್ಟಾರ್‌ ಆಟಗಾರ್ತಿ ಅಲೆಕ್ಸಿಯಾ ಪುಟೆಯಾಸ್ 77ನೇ ನಿಮಿಷದಲ್ಲಿ ಕಣಕ್ಕಿಳಿದು ಕಾಲ್ಚಳಕ ಮೆರೆದರೂ, ಗೋಲು ಗಳಿಸಲು ವಿಫಲರಾದರು. ಸ್ಪೇನ್‌ನ ಆಕ್ರಮಣಕಾರಿ ಆಟಕ್ಕೆ ಕಡಿವಾಣ ತೊಡಿಸಲು, ಕೋಸ್ಟರಿಕಾ ತಂಡದವರು ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕಾಯಿತು. ಸ್ವಿಟ್ಜರ್‌ಲೆಂಡ್‌ ಶುಭಾರಂಭ (ಡನೇಡಿನ್‌ ವರದಿ): ಡನೇಡಿನ್‌ನಲ್ಲಿ ನಡೆದ ಪಂದ್ಯದಲ್ಲಿ ಸ್ವಿಟ್ಜರ್‌ಲೆಂಡ್‌ 2–0 ಗೋಲುಗಳಿಂದ ಫಿಲಿಪ್ಪೀನ್ಸ್‌ ವಿರುದ್ದ ಗೆದ್ದಿತು. ರಮೋನಾ ಬಾಕ್‌ಮನ್‌ (45ನೇ ನಿ., ಪೆನಾಲ್ಟಿ) ಮತ್ತು ಸೆರೈನಾ ಪ್ಯುಬೆಲ್ (64 ನೇ ನಿ.) ಅವರು ಗೋಲು ಗಳಿಸಿದರು. ಡ್ರಾ ಪಂದ್ಯದಲ್ಲಿ ಕೆನಡಾ (ಮೆಲ್ಬರ್ನ್‌ ವರದಿ): ಮೆಲ್ಬರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಪೆನಾಲ್ಟಿ ಕಿಕ್‌ ಅವಕಾಶವನ್ನು ಹಾಳುಮಾಡಿಕೊಂಡ ಕೆನಡಾ ತಂಡ, ನೈಜೀರಿಯಾ ಜತೆ ಗೋಲುರಹಿತ ಡ್ರಾಗೆ ತೃಪ್ತಿಪಟ್ಟುಕೊಂಡಿತು. ಪಂದ್ಯದ 50ನೇ ನಿಮಿಷದಲ್ಲಿ ಕೆನಡಾಕ್ಕೆ ಪೆನಾಲ್ಟಿ ಕಿಕ್‌ ಅವಕಾಶ ಲಭಿಸಿತ್ತು. ಅನುಭವಿ ಆಟಗಾರ್ತಿ ಕ್ರಿಸ್ಟಿನ್ ಸಿಂಕ್ಲೇರ್‌ ಅವರು ಒದ್ದ ಚೆಂಡನ್ನು ನೈಜೀರಿಯಾ ಗೋಲ್‌ಕೀಪರ್‌ ಚಿಯಮಾಕಾ ನಾಡೊಝಿ ಡೈವ್‌ ಮಾಡಿ ತಡೆದರು. ಚಿಯಮಾಕಾ ಅವರು ಕೆನಡಾ ತಂಡದ ಗೋಲು ಗಳಿಸುವ ಇತರ ಕೆಲವು ಪ್ರಯತ್ನಗಳಿಗೂ ಅಡ್ಡಿಯಾದರು. 40 ವರ್ಷದ ಸಿಂಕ್ಲೇರ್‌ ಅವರು 190 ಗೋಲುಗಳನ್ನು ಗಳಿಸಿದ್ದು, ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ (ಮಹಿಳೆಯರು ಮತ್ತು ಪುರುಷರಲ್ಲಿ) ಅತ್ಯಧಿಕ ಗೋಲು ಗಳಿಸಿದ ಆಟಗಾರ್ತಿ ಎನಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.