ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ | ಸ್ವೀಡನ್‌ಗೆ ಪ್ರಯಾಸದ ಗೆಲುವು ವೆಲಿಂಗ್ಟನ್‌ : ದಕ್ಷಿಣ ಆಫ್ರಿಕಾ ತಂಡದವರು ಒಡ್ಡಿದ ಅನಿರೀಕ್ಷಿತ ಪ್ರತಿರೋಧವನ್ನು ಬದಿಗೊತ್ತಿದ ಸ್ವೀಡನ್‌ ತಂಡ, ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ವೆಲಿಂಗ್ಟನ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಒಂದು ಗೋಲಿನ ಹಿನ್ನಡೆ ಅನುಭವಿಸಿದರೂ ಮರುಹೋರಾಟ ನಡೆಸಿದ ಸ್ವೀಡನ್‌, 2–1 ರಿಂದ ಗೆದ್ದಿತು. ಹಿಲ್ಡಾ ಮಗಾಯ ಅವರು 48ನೇ ನಿಮಿಷದಲ್ಲಿ ಗೋಲು ಗಳಿಸಿ ದಕ್ಷಿಣ ಆಫ್ರಿಕಾಕ್ಕೆ ಮುನ್ನಡೆ ತಂದಿತ್ತರು. ಫ್ರಿಡೊಲಿನಾ ರೊಲ್ಫೊ (65ನೇ ನಿ.) ಮತ್ತು ಅಮಂಡಾ ಇಲೆಸ್ಟೆಡ್‌ (90 ನೇ ನಿ.) ಅವರು ಗೋಲು ಗಳಿಸಿ ಸ್ವೀಡನ್‌ ಗೆಲುವಿಗೆ ಕಾರಣರಾದರು. ನ್ಯೂಜಿಲೆಂಡ್‌ನ ಡನೇಡಿನ್‌ನಲ್ಲಿ ನಡೆದ ಪಂದ್ಯದಲ್ಲಿ 2019ರ ಟೂರ್ನಿಯ ‘ರನ್ನರ್‌ ಅಪ್‌’ ನೆದರ್ಲೆಂಡ್ಸ್‌ 1–0 ಗೋಲಿನಿಂದ ಪೋರ್ಚುಗಲ್‌ ವಿರುದ್ದ ಗೆದ್ದಿತು. ಡಿಫೆಂಡರ್‌ ಸ್ಟೆಫಾನಿ ವಾನ್‌ ಡೆರ್ ಗ್ರಾಟ್‌ ಅವರು 13ನೇ ನಿಮಿಷದಲ್ಲಿ ಗೆಲುವಿನ ಗೋಲು ತಂದಿತ್ತರು. ಕಾರ್ನರ್‌ ಕಿಕ್‌ನಲ್ಲಿ ಲಭಿಸಿದ ಚೆಂಡನ್ನು ಹೆಡ್‌ ಮಾಡಿ ಅವರು ಗುರಿ ಸೇರಿಸಿದರು. ಜಮೈಕಾ–ಫ್ರಾನ್ಸ್ ಪಂದ್ಯ ಡ್ರಾ (ಸಿಡ್ನಿ ವರದಿ): ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಛಲದ ಆಟವಾಡಿದ ಜಮೈಕಾ, ವಿಶ್ವ ರ್‍ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿರುವ ಫ್ರಾನ್ಸ್‌ ತಂಡವನ್ನು ಗೋಲುರಹಿತ ಡ್ರಾದಲ್ಲಿ ಕಟ್ಟಿಹಾಕಿತು. ಫ್ರಾನ್ಸ್ ತಂಡ ‘ಎಫ್‌’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನಾಕೌಟ್‌ ಹಂತ ಪ್ರವೇಶಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮೊದಲ ಪಂದ್ಯದಲ್ಲಿ ಪೂರ್ಣ ಪಾಯಿಂಟ್ಸ್‌ ಗಳಿಸಲು ವಿಫಲವಾಗಿದೆ. ರ್‍ಯಾಂಕಿಂಗ್‌ನಲ್ಲಿ ತನಗಿಂತ 38 ಸ್ಥಾನಗಳಷ್ಟು ಕೆಳಗಿರುವ ಎದುರಾಳಿಗಳ ವಿರುದ್ಧ ಗೋಲು ಗಳಿಸಲು ಲಭಿಸಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಫ್ರಾನ್ಸ್‌ ಎಡವಿತು. ತಂಡದ ಪ್ರಮುಖ ಸ್ಟ್ರೈಕರ್‌ ಖದೀಜಾ ಶಾ ಅವರು ಕೊನೆಯ ಕೆಲವು ನಿಮಿಷಗಳಿರುವಾಗ ರೆಡ್‌ ಕಾರ್ಡ್‌ ಪಡೆದು ಹೊರನಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.