| ತಂಡ ಕಳುಹಿಸುವ ವಿಚಾರದಲ್ಲಿ ಮೋದಿ ಮಧ್ಯಪ್ರವೇಶಿಸಲಿ: ಸ್ಟಿಮ್ಯಾಚ್ ಮನವಿ ನವದೆಹಲಿ: ಮುಂಬರುವ ಏಷ್ಯನ್‌ ಗೇಮ್ಸ್‌ಗೆ ಭಾರತ ಫುಟ್‌ಬಾಲ್‌ ತಂಡದ ಪಾಲ್ಗೊಳ್ಳುವಿಕೆ ಕುರಿತಂತೆ ಮಧ್ಯಪ್ರವೇಶ ಮಾಡಬೇಕೆಂದು ರಾಷ್ಟ್ರೀಯ ಫುಟ್‌ಬಾಲ್‌ ತಂಡದ ಕೋಚ್‌ ಇಗೊರ್‌ ಸ್ಟಿಮ್ಯಾಚ್‌ ಅವರು ಪ್ರಧಾನಿ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್‌ ಅವರಿಗೆ ಮನವಿ ಮಾಡಿದ್ದಾರೆ. ಹಾಂಗ್‌ಝೌನಲ್ಲಿ ಸೆ.23 ರಿಂದ ನಡೆಯಲಿರುವ ಏಷ್ಯನ್‌ ಗೇಮ್ಸ್‌ಗೆ ಭಾರತ 23 ವರ್ಷದೊಳಗಿನ ಫುಟ್‌ಬಾಲ್‌ ತಂಡವನ್ನು ಕಳುಹಿಸಲು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಯೋಜನೆ ಹಾಕಿಕೊಂಡಿತ್ತು. ಆದರೆ ಭಾರತ ತಂಡವು ಏಷ್ಯಾದಲ್ಲಿ ಅಗ್ರ 8ರೊಳಗಿನ ಸ್ಥಾನ ಹೊಂದಿಲ್ಲ ಎಂಬ ಕಾರಣ, ಫುಟ್‌ಬಾಲ್‌ ತಂಡವನ್ನು ಏಷ್ಯನ್‌ ಗೇಮ್ಸ್‌ಗೆ ಕಳುಹಿಸದಿರಲು ಕ್ರೀಡಾ ಸಚಿವಾಲಯ ನಿರ್ಧರಿಸಿದೆ. ಏಷ್ಯ‌ನ್‌ ಫುಟ್‌ಬಾಲ್‌ ಕಾನ್ಫೆಡರೇಷನ್‌ನ ದೇಶಗಳಲ್ಲಿ ಭಾರತವು 18ನೇ ರ‍್ಯಾಂಕ್‌ ಹೊಂದಿದೆ. ಆದರೆ ಫುಟ್‌ಬಾಲ್‌ ತಂಡವನ್ನು ಕಳುಹಿಸಲು ಕ್ರಮವಹಿಸುವಂತೆ ಸ್ಟಿಮ್ಯಾಚ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದ ಪತ್ರದಲ್ಲಿ ಪ್ರಧಾನಿ ಹಾಗೂ ಕ್ರೀಡಾ ಸಚಿವರಿಗೆ ಮನವಿ ಮಾಡಿದ್ಧಾರೆ. ‘ನೀವು ಮಧ್ಯಪ್ರವೇಶಿಸಿ ಭಾರತ ತಂಡ ಪಾಲ್ಗೊಳ್ಳುವಂತೆ ಮಾಡಬೇಕು’ ಎಂದು ಕೋರಿದ್ದಾರೆ. ‘23 ವರ್ಷದೊಳಗಿನವರ ತಂಡವು ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡಿದೆ. 23 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಅರ್ಹತಾ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಆದರೆ ಈ ತಂಡ ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸುವುದರಿಂದ ವಂಚಿತವಾಗಿದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ. ‘ಈ ತಂಡವು ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸಲು ಅರ್ಹವಾಗಿದೆ. ತಂಡಕ್ಕೆ ಅವಕಾಶ ನಿರಾಕರಿಸಲು ನೀಡಿರುವ ಕಾರಣವನ್ನು ಒಪ್ಪಲಾಗದು. ರಾಷ್ಟ್ರೀಯ ಫುಟ್‌ಬಾಲ್‌ ತಂಡದ ಕೋಚ್‌ ಆಗಿದ್ದುಕೊಂಡು, ಈ ವಿಷಯವನ್ನು ನಿಮ್ಮ ಹಾಗೂ ಕ್ರೀಡಾ ಸಚಿವರ ಗಮನಕ್ಕೆ ತರುವುದು ಮುಖ್ಯ ಎಂದು ನಾನು ಭಾವಿಸಿದೆ’ ಎಂದು ಪತ್ರದಲ್ಲಿ ಹೇಳಿದ್ದಾರೆ. ‘ರ್‍ಯಾಂಕಿಂಗ್‌ನಲ್ಲಿ ಕೆಳಗಿನ ಸ್ಥಾನದಲ್ಲಿದೆ ಎಂಬ ಕಾರಣ ನೀಡಿ ಕ್ರೀಡಾ ಸಚಿವಾಲಯವು ಫುಟ್‌ಬಾಲ್‌ ತಂಡಕ್ಕೆ ಅವಕಾಶ ನಿರಾಕರಿಸಿದೆ. ಆದರೆ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಕೆಲವು ತಂಡಗಳಿಂತ ಉತ್ತಮ ರ‍್ಯಾಂಕ್‌ಅನ್ನು ನಮ್ಮ ತಂಡ ಹೊಂದಿದೆ. ಮಾತ್ರವಲ್ಲ, ರ‍್ಯಾಂಕಿಂಗ್‌ನಲ್ಲಿ ಕೆಳಗಿನ ಸ್ಥಾನದಲ್ಲಿರುವ ತಂಡಗಳು ತನಗಿಂತ ಮೇಲಿನ ಸ್ಥಾನದಲ್ಲಿರುವ ತಂಡಗಳನ್ನು ಮಣಿಸಿದ ಉದಾಹರಣೆಗಳು ಸಾಕಷ್ಟಿವೆ’ ಎಂದು ಪತ್ರದಲ್ಲಿ ಬರೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.