ಬೆಂಗಳೂರು: ಡುರಾಂಡ್‌ ಫುಟ್‌ಬಾಲ್‌ ಕಪ್‌ ಟ್ರೋಫಿಗೆ ಅದ್ದೂರಿ ಸ್ವಾಗತ ಬೆಂಗಳೂರು: ಏಷ್ಯಾದ ಅತ್ಯಂತ ಹಳೆಯ ಫುಟ್‌ಬಾಲ್‌ ಟೂರ್ನಿ ಎನಿಸಿರುವ ಡುರಾಂಡ್‌ ಕಪ್‌ನ ಟ್ರೋಫಿಗಳಿಗೆ ಮಂಗಳವಾರ ಉದ್ಯಾನನಗರಿಯಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಡುರಾಂಡ್‌ ಕಪ್‌ ವಿಜೇತರಿಗೆ ನೀಡುವ ಮೂರು ಟ್ರೋಫಿಗಳ ಪ್ರವಾಸಕ್ಕೆ ಜೂನ್‌ 30 ರಂದು ನವದೆಹಲಿಯಲ್ಲಿ ಚಾಲನೆ ಲಭಿಸಿತ್ತು. ಇಲ್ಲಿನ ಆರ್ಮಿ ಸರ್ವಿಸ್‌ ಕೋರ್‌ (ಎಎಸ್‌ಸಿ) ಸೆಂಟರ್ ಮತ್ತು ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಟ್ರೋಫಿಗಳನ್ನು ಬರಮಾಡಿಕೊಳ್ಳಲಾಯಿತು. 132ನೇ ಡುರಾಂಡ್‌ ಕಪ್‌ ಟೂರ್ನಿ ಆ 3 ರಿಂದ ಸೆ.3ರ ವರೆಗೆ ನಡೆಯಲಿದೆ. ಅತ್ಯಂತ ಹಳೆಯ ಟೂರ್ನಿಯ ಇತಿಹಾಸವನ್ನು ದೇಶದ ವಿವಿಧೆಡೆಯಿರುವ ಫುಟ್‌ಬಾಲ್‌ ಪ್ರೇಮಿಗಳಿಗೆ ತಲುಪಿಸುವ ಉದ್ದೇಶದಿಂದ ಟ್ರೋಫಿಗಳ ಪ್ರವಾಸ ಆಯೋಜಿಸಲಾಗಿದೆ. ಡೆಹ್ರಾಡೂನ್, ಉಧಂಪುರ, ಜೈಪುರ, ಪುಣೆ, ಮುಂಬೈ, ಕಾರವಾರ, ಕೇರಳದ ಏಝಿಮಲ, ಕೊಚ್ಚಿ ಮತ್ತು ಗುವಾಹಟಿ ಪ್ರವಾಸ ಮುಗಿಸಿದ ಬಳಿಕ ಟ್ರೋಫಿಗಳನ್ನು ಬೆಂಗಳೂರಿಗೆ ತರಲಾಗಿದೆ. ನಗರದಲ್ಲಿ ಟ್ರೋಫಿಯ ಪ್ರವಾಸಕ್ಕೆ ಕರ್ನಾಟಕ ಮತ್ತು ಕೇರಳ ಸಬ್‌ ಏರಿಯಾ ಜನರಲ್‌ ಆಫೀಸರ್‌ ಕಮಾಂಡಿಂಗ್ (ಜಿಒಸಿ) ಮೇಜರ್‌ ಜನರಲ್‌ ರವಿ ಮುರುಗನ್‌ ಅವರು ಹಸಿರು ನಿಶಾನೆ ತೋರಿಸಿದರು. ಟ್ರೋಫಿಗಳನ್ನು ವಿಧಾನಸೌಧ ಮತ್ತು ಬೆಂಗಳೂರು ಅರಮನೆಯ ಮುಂಭಾಗ ಕೆಲಸಮಯ ಪ್ರದರ್ಶನಕ್ಕೆ ಇಡಲಾಯಿತು. ಈ ವೇಳೆ ಮಾತನಾಡಿದ ರವಿ ಮುರುಗನ್, ‘ಡುರಾಂಡ್‌ ಕಪ್‌ ಟೂರ್ನಿಯು ಭಾರತದ ಫುಟ್‌ಬಾಲ್‌ನ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ದೇಶದ ಅತ್ಯಂತ ಹಳೆಯ ಟೂರ್ನಿಯ ಟ್ರೋಫಿಗಳು ಬೆಂಗಳೂರಿಗೆ ತಲುಪಿರುವುದು ಸ್ಮರಣೀಯ ಕ್ಷಣ’ ಎಂದರು. ಮೂರು ಟ್ರೋಫಿಗಳು: ಡುರಾಂಡ್‌ ಕಪ್‌ ಟೂರ್ನಿಯನ್ನು ಗೆಲ್ಲುವ ತಂಡಕ್ಕೆ ಮೂರು ಟ್ರೋಫಿಗಳನ್ನು ನೀಡಲಾಗುತ್ತದೆ. ಮೂರೂ ಟ್ರೋಫಿಗಳನ್ನು ಪ್ರದರ್ಶಿಸಲಾಯಿತು. ಡುರಾಂಡ್‌ ಕಪ್‌ ಮತ್ತು ಶಿಮ್ಲಾ ಟ್ರೋಫಿ (ಇವೆರಡೂ ರೋಲಿಂಗ್‌ ಶೀಲ್ಡ್) ಹಾಗೂ ಪ್ರೆಸಿಡೆಂಟ್ಸ್‌ ಕಪ್‌ (1956ರಲ್ಲಿ ಮೊದಲ ಬಾರಿ ಪ್ರದಾನ ಮಾಡಲಾಗಿತ್ತು) ಈ ಮೂರು ಟ್ರೋಫಿಗಳಾಗಿವೆ. 24 ತಂಡಗಳು: ಈ ಬಾರಿಯ ಟೂರ್ನಿಯಲ್ಲಿ ವಿದೇಶದ ಎರಡು ಕ್ಲಬ್‌ಗಳು ಸೇರಿದಂತೆ 24 ತಂಡಗಳು ಪಾಲ್ಗೊಳ್ಳಲಿವೆ. ಹೋದ ವರ್ಷ 20 ತಂಡಗಳು ಹಣಾಹಣಿ ನಡೆಸಿದ್ದವು. ಗುವಾಹಟಿ, ಕೋಕ್ರಝಾರ್‌, ಶಿಲ್ಲಾಂಗ್‌ ಮತ್ತು ಕೋಲ್ಕತ್ತದಲ್ಲಿ ಪಂದ್ಯಗಳು ಆಯೋಜನೆಯಾಗಿವೆ. ಕಳೆದ ವರ್ಷ ನಡೆದ ಟೂರ್ನಿಯಲ್ಲಿ ಬಿಎಫ್‌ಸಿ ಚಾಂಪಿಯನ್‌ ಆಗಿತ್ತು. ಸುನಿಲ್‌ ಚೆಟ್ರಿ ನೇತೃತ್ವದ ತಂಡವು ಫೈನಲ್‌ನಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಮಣಿಸಿತ್ತು. ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆ (ಕೆಎಸ್‌ಎಫ್‌ಎ) ಗೌರವ ಕಾರ್ಯದರ್ಶಿ ಎಂ.ಸತ್ಯನಾರಾಯಣ, ಬಿಎಫ್‌ಸಿ ನಿರ್ದೇಶಕ (ಫುಟ್‌ಬಾಲ್‌) ಡರೆನ್ ಕಾಲ್ಡೀರಾ, ಸೇನೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.