ಏಷ್ಯನ್‌ ಗೇಮ್ಸ್‌ ಫುಟ್‌ಬಾಲ್‌: ‘ಎ’ ಗುಂಪಿನಲ್ಲಿ ಭಾರತ ಹಾಂಗ್‌ಝೌ: ಭಾರತ ಫುಟ್‌ಬಾಲ್‌ ತಂಡವು ಹಾಂಗ್‌ಝೌ ಏಷ್ಯನ್‌ ಗೇಮ್ಸ್‌ನಲ್ಲಿ ಚೀನಾ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ ತಂಡಗಳ ಜತೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಮಹಿಳಾ ತಂಡವು ಥಾಯ್ಲೆಂಡ್‌ ಮತ್ತು ಚೀನಾ ತೈಪೆ ಜತೆ ‘ಬಿ’ ಗುಂಪಿನಲ್ಲಿ ಆಡಲಿದೆ. ಕೇಂದ್ರ ಕ್ರೀಡಾ ಸಚಿವಾಲಯವು ಈಗಿರುವ ನಿಯಮಗಳನ್ನು ಮಾರ್ಪಾಡು ಮಾಡಿ, ಭಾರತ ಪುರುಷರ ಮತ್ತು ಮಹಿಳಾ ತಂಡಗಳಿಗೆ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿತ್ತು. ಪುರುಷರ ವಿಭಾಗದಲ್ಲಿ ಆರು ಗುಂಪುಗಳನ್ನು ಮಾಡಿ, ಲೀಗ್‌ ಹಂತದ ಪಂದ್ಯಗಳನ್ನು ಆಡಿಸಲಾಗುತ್ತದೆ. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳಲ್ಲಿ ನಾಲ್ಕು ಅತ್ಯುತ್ತಮ ತಂಡಗಳು 16ರ ಘಟ್ಟ ಪ್ರವೇಶಿಸಲಿವೆ. 2002ರಿಂದ ಈಚೆಗೆ ಏಷ್ಯನ್‌ ಗೇಮ್ಸ್‌ನ ಫುಟ್‌ಬಾಲ್‌ನಲ್ಲಿ 23 ವರ್ಷದೊಳಗಿನ ತಂಡಗಳು ಪಾಲ್ಗೊಳ್ಳುತ್ತಿವೆ. ಆದರೆ ಏಷ್ಯನ್‌ ಗೇಮ್ಸ್‌ಅನ್ನು ಒಂದು ವರ್ಷ ಮುಂದೂಡಿದ್ದರಿಂದ ಈ ಬಾರಿ 24 ವರ್ಷದೊಳಗಿನವರಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಇದಕ್ಕಿಂತ ಹೆಚ್ಚು ವಯಸ್ಸಿನ ಮೂವರಿಗೆ ಆಡಲು ಅವಕಾಶವಿದೆ. ಭಾರತ ತಂಡವು ಅನುಭವಿ ಸ್ಟ್ರೈಕರ್‌ ಸುನಿಲ್ ಚೆಟ್ರಿ, ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಮತ್ತು ಡಿಫೆಂಡರ್‌ ಸಂದೇಶ್‌ ಜಿಂಗನ್ ಅವರನ್ನು ವಯಸ್ಸು ಮೀರಿರುವ ಆಟಗಾರರ ‘ಕೋಟಾ’ದಡಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.