ಮಹಿಳಾ ಫುಟ್‌ಬಾಲ್‌ ವಿಶ್ವಕಪ್‌: ಇಟಲಿ ಮೇಲೆ ಗೆದ್ದ ಸ್ವೀಡನ್ ನಾಕೌಟ್‌ಗೆ ವೆಲಿಂಗ್ಟನ್‌: ಇಟಲಿ ತಂಡದ ಮೇಲೆ 5–0 ಗೋಲುಗಳ ದೊಡ್ಡ ಅಂತರದ ಜಯಗಳಿಸಿದ ಸ್ವೀಡನ್ ತಂಡದವರು ಮಹಿಳಾ ವಿಶ್ವಕಪ್ ಫುಟ್‌ಬಾಲ್‌ ಟೂರ್ನಿಯ ಪ್ರಿಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. ಫ್ರಾನ್ಸ್‌ ತಂಡ ಬ್ರಿಸ್ಬೇನ್‌ನಲ್ಲಿ ಶನಿವಾರ ನಡೆದ ‘ಎಫ್‌’ ಗುಂಪಿನ ಬಲಿಷ್ಠ ತಂಡಗಳ ನಡುವಣ ಪಂದ್ಯದಲ್ಲಿ ಬ್ರೆಜಿಲ್ ತಂಡವನ್ನು 2–1 ಗೋಲುಗಳಿಂದ ಸೋಲಿಸಿ ನಾಕೌಟ್‌ ಹಂತದ ದಾರಿಯನ್ನು ಹೆಚ್ಚುಕಮ್ಮಿ ಭದ್ರಗೊಳಿಸಿತು. ಮೂರನೇ ಕ್ರಮಾಂಕದ ಸ್ವೀಡನ್‌, ‘ಜಿ’ ಗುಂಪಿನಲ್ಲಿ ಇನ್ನೂ ಒಂದು ಪಂದ್ಯ ಉಳಿದಿರುವಂತೆ ನಾಕೌಟ್‌ಗೆ ಸ್ಥಾನ ಖಾತರಿಪಡಿಸಿದೆ. ಪ್ರಶಸ್ತಿಗೆ ನೆಚ್ಚಿನ ತಂಡವಾಗಿರುವ ಸ್ಪೇನ್‌, ಮಾಜಿ ಚಾಂಪಿಯನ್ ಜಪಾನ್‌ ತಂಡಗಳೂ ನಾಕೌಟ್‌ಗೆ ಮುನ್ನಡೆದಿವೆ. ಹೊಂದಾಣಿಕೆ ಮತ್ತು ಕರಾರುವಾಕ್‌ ಪಾಸ್‌ಗಳೊಡನೆ ಆಡಿದ ಸ್ವೀಡನ್‌ ಪೂರ್ವಾರ್ಧದ ಮೊದಲ ಏಳು ನಿಮಿಷದಲ್ಲೇ ಮೂರು ಗೋಲುಗಳನ್ನು ಗಳಿಸಿದ್ದು, ಇಟಲಿಯನ್ನು ದಂಗುಬಡಿಸಿತು. ಅಮಂಡಾ ಇಲೆಸ್ಟೆಡ್ ‘ಹೆಡರ್‌’ ಮೂಲಕ ಎರಡು ಗೋಲುಗಳನ್ನು ಗಳಿಸಿದರೆ, ಫಿಡ್ರೊಲಿನಾ ರೋಲ್ಫೊ, ಸ್ಟಿನಾ ಬ್ಲ್ಯಾಕ್‌ಸ್ಟಿನಿಯಸ್‌ ಮತ್ತು ರೆಬೆಕಾ ಬ್ಲೊಮ್‌ವಿಸ್ಟ್‌ ಒಂದೊಂದು ಗೋಲುಗಳನ್ನು ಗಳಿಸಿದರು. ಸ್ವೀಡನ್‌ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಮೇಲೆ 2–1 ರಿಂದ ಜಯಗಳಿಸಿತ್ತು. ಆದರೆ ಇಟಲಿ ತಂಡದ ಎದುರೇ ಸುಲಲಿತವಾಗಿ ಆಡಿತು. ಫ್ರಾನ್ಸ್‌ಗೆ ಜಯ: ಸುಮಾರು 49,000 ಪ್ರೇಕ್ಷಕರೆದುರು ನಡೆದ ಪಂದ್ಯದಲ್ಲಿ ಫ್ರಾನ್ಸ್ ತಂಡ ಜಯಗಳಿಸಿ ನಿಟ್ಟುಸಿರಿಟ್ಟಿತು. ಮೊದಲ ಪಂದ್ಯದಲ್ಲಿ ಫ್ರಾನ್ಸ್‌, ಜಮೈಕಾ ವಿರುದ್ಧ ಗೋಲಿಲ್ಲದೇ ಡ್ರಾ ಮಾಡಿಕೊಂಡು ನಿರಾಸೆ ಅನುಭವಿಸಿತ್ತು. ಫ್ರಾನ್ಸ್‌ ಗುಂಪಿನಲ್ಲಿ ತನ್ನ ಕೊನೆಯ ಪಂದ್ಯವನ್ನು, ವಿಶ್ವಕಪ್‌ನಲ್ಲಿ ಮೊದಲ ಬಾರಿ ಪಾಲ್ಗೊಂಡಿರುವ ಪನಾಮಾ ವಿರುದ್ಧ ಆಡಲಿದೆ. ಫ್ರಾನ್ಸ್‌ ತಂಡಕ್ಕೆ ಅನುಭವಿ ದಾಳಿಗಾರ್ತಿ ಯುಜೆನಿ ಲಿ ಸೊಮರ್ ಬೇಗನೇ ಲೀಡ್‌ ದೊರಕಿಸಿಕೊಟ್ಟರು. ಆದರೆ ದ್ವಿತೀಯಾರ್ಧದಲ್ಲಿ ಡೆಬಿನ್ಹಾ ಗೋಲು ಗಳಿಸಿದ್ದರಿಂದ ಬ್ರೆಜಿಲ್‌ 1–1 ಸಮಮಾಡಿಕೊಂಡಿತು. ಆದರೆ ಅಂತಿಮ ನಗು ಫ್ರೆಂಚರದಾಯಿತು. 83ನೇ ನಿಮಿಷ ಕಾರ್ನರ್‌ ಮೂಲಕ ಬಂದ ಚೆಂಡನ್ನು ಹೆಡ್‌ ಮಾಡಿ ಗೆಲುವಿನ ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.