ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌: ಜಪಾನ್‌ಗೆ ಗೆಲುವು ಮೆಲ್ಬರ್ನ್‌: ಆತಿಥೇಯ ಆಸ್ಟ್ರೇಲಿಯಾ ತಂಡ ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ 16ರ ಘಟ್ಟ ಪ್ರವೇಶಿಸಿತು. ಜಪಾನ್‌, ಸ್ಪೇನ್‌ ಮತ್ತು ನೈಜೀರಿಯಾ ತಂಡಗಳೂ ನಾಕೌಟ್‌ನಲ್ಲಿ ಸ್ಥಾನ ಗಳಿಸಿದವು. ಸೋಮವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 4–0 ಗೋಲುಗಳಿಂದ ಕೆನಡಾ ತಂಡವನ್ನು ಮಣಿಸಿತು. ಭರ್ಜರಿ ಗೆಲುವಿನೊಂದಿಗೆ ಆರು ಪಾಯಿಂಟ್ಸ್‌ ಸಂಗ್ರಹಿಸಿ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿತು. ಇನ್ನೊಂದು ಪಂದ್ಯದಲ್ಲಿ ಐರ್ಲೆಂಡ್‌ ಜತೆ ಗೋಲುರಹಿತ ಡ್ರಾ ಸಾಧಿಸಿದ ನೈಜೀರಿಯಾ, ಐದು ಪಾಯಿಂಟ್ಸ್‌ಗಳೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಮುಂದಿನ ಹಂತಕ್ಕೆ ಲಗ್ಗೆಯಿಟ್ಟಿತು. ಕೆನಡಾ (4 ಪಾಯಿಂಟ್ಸ್‌) ಮತ್ತು ಐರ್ಲೆಂಡ್‌ (1 ಪಾಯಿಂಟ್) ತಂಡಗಳು ಹೊರಬಿದ್ದವು. ಹಿಂದಿನ ಪಂದ್ಯದಲ್ಲಿ ನೈಜೀರಿಯಾ ಕೈಯಲ್ಲಿ 2–3 ರಿಂದ ಆಘಾತ ಅನುಭವಿಸಿದ್ದ ಆಸ್ಟ್ರೇಲಿಯಾ, ಲೀಗ್‌ ಹಂತದಲ್ಲೇ ಹೊರಬೀಳುವ ಅಪಾಯಕ್ಕೆ ಸಿಲುಕಿತ್ತು. ಆದರೆ ಕೆನಡಾ ವಿರುದ್ದ ಅಮೋಘ ಆಟವಾಡಿ ಅಭಿಮಾನಿಗಳ ಮನಗೆದ್ದಿತು. ಹೇಯ್ಲಿ ರಾಸೊ (9 ಮತ್ತು 39ನೇ ನಿ.), ಮೇರಿ ಫೌಲೆರ್‌ (58) ಮತ್ತು ಸ್ಟೆಫಾನಿ ಕ್ಯಾಟ್ಲಿ (90+4) ಅವರು ಆತಿಥೇಯ ತಂಡದ ಪರ ಗೋಲು ಗಳಿಸಿದರು. ಜಪಾನ್‌ಗೆ ಗೆಲುವು: ವೆಲಿಂಗ್ಟನ್‌ನಲ್ಲಿ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಜಪಾನ್‌ 4–0 ಗೋಲುಗಳಿಂದ ಸ್ಪೇನ್‌ ತಂಡವನ್ನು ಮಣಿಸಿ ತನ್ನ ಶಕ್ತಿ ಪ್ರದರ್ಶಿಸಿತು. ಈ ಮೂಲಕ ಅಜೇಯ ಸಾಧನೆಯೊಂದಿಗೆ (9 ಪಾಯಿಂಟ್ಸ್) ನಾಕೌಟ್‌ ಹಂತ ಪ್ರವೇಶಿಸಿದರೆ, ಆರು ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನ ಪಡೆದ ಸ್ಪೇನ್‌ ಕೂಡ ಮುಂದಿನ ಹಂತದಲ್ಲಿ ಸ್ಥಾನ ಗಳಿಸಿತು. ಹಿನಾಟ ಮಿಯಜಾವ (12 ಮತ್ತು 40ನೇ ನಿ.), ರಿಕೊ ಉಯೆಕಿ (29) ಹಾಗೂ ಮಿನ ಟನಾಕ (82) ಅವರು ಜಪಾನ್‌ ಪರ ಚೆಂಡನ್ನು ಗುರಿ ಸೇರಿಸಿದರು. ಸ್ಪೇನ್‌ ವಿರುದ್ಧದ ಐದು ಪಂದ್ಯಗಳಲ್ಲಿ ಜಪಾನ್‌ಗೆ ದೊರೆತ ಮೊದಲ ಗೆಲುವು ಇದು. ‘ಸಿ’ ಗುಂಪಿನ ಇನ್ನೊಂದು ಪಂದ್ಯದಲ್ಲಿ ಜಾಂಬಿಯಾ 3–1 ಗೋಲುಗಳಿಂದ ಕೋಸ್ಟರಿಕಾ ತಂಡವನ್ನು ಮಣಿಸಿ, ವಿಶ್ವಕಪ್‌ ಟೂರ್ನಿಯಲ್ಲಿ ಚೊಚ್ಚಲ ಗೆಲುವಿನ ಸಂಭ್ರಮ ಆಚರಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.