ನೆದರ್ಲೆಂಡ್ಸ್‌ ಗೋಲಿನ ಮಳೆ ಡನೇಡಿನ್‌ (ಎಎಫ್‌ಪಿ): ಕೊನೆಯ ಲೀಗ್‌ ಪಂದ್ಯದಲ್ಲಿ ಗೋಲಿನ ಮಳೆ ಸುರಿಸಿದ ನೆದರ್ಲೆಂಡ್ಸ್‌ ತಂಡದವರು ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ 16ರ ಘಟ್ಟ ಪ್ರವೇಶಿಸಿದರು. ಮಂಗಳವಾರ ನಡೆದ ‘ಇ’ ಗುಂಪಿನ ಪಂದ್ಯದಲ್ಲಿ ನೆದರ್ಲೆಂಡ್ಸ್‌ 7–0 ಗೋಲುಗಳಿಂದ ವಿಯೆಟ್ನಾಂ ತಂಡವನ್ನು ಮಣಿಸಿತು. ಇದರೊಂದಿಗೆ ಏಳು ಪಾಯಿಂಟ್ಸ್‌ ಕಲೆಹಾಕಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದು, ನಾಕೌಟ್‌ಗೆ ಲಗ್ಗೆಯಿಟ್ಟಿತು. ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಅಮೆರಿಕ ತಂಡ ಕೊನೆಯ ಲೀಗ್‌ ಪಂದ್ಯದಲ್ಲಿ ಪೋರ್ಚುಗಲ್‌ ಜತೆ ಗೋಲು ರಹಿತ ಡ್ರಾ ಮಾಡಿಕೊಂಡು, ಮುಂದಿನ ಹಂತ ಪ್ರವೇಶಿಸಿತು. ಆಕ್ಲೆಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಪೋರ್ಚುಗಲ್ ಗೆದ್ದಿದ್ದರೆ, ಅಮೆರಿಕ ಹೊರಬೀಳುತ್ತಿತ್ತು. ಆದರೆ ಡ್ರಾ ಸಾಧಿಸಿದ ಅಮೆರಿಕ ಐದು ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನ ಪಡೆದು 16ರ ಘಟ್ಟದಲ್ಲಿ ಸ್ಥಾನ ಪಡೆಯಿತು. ಪೋರ್ಚುಗಲ್‌ ನಾಲ್ಕು ಪಾಯಿಂಟ್ಸ್‌ಗಳೊಂದಿಗೆ ತನ್ನ ಲೀಗ್‌ ವ್ಯವಹಾರ ಕೊನೆಗೊಳಿಸಿತು. ವಿಯೆಟ್ನಾಂ ವಿರುದ್ಧದ ಪಂದ್ಯದಲ್ಲಿ ಮೊದಲ ನಿಮಿಷದಿಂದಲೇ ಆಕ್ರಮಣಕಾರಿ ಆಟವಾಡಿದ ನೆದರ್ಲೆಂಡ್ಸ್‌, ಈ ವಿಶ್ವಕಪ್‌ ಟೂರ್ನಿಯಲ್ಲಿ ದೊಡ್ಡ ಅಂತರದ ಗೆಲುವು ತನ್ನದಾಗಿಸಿಕೊಂಡಿತು. ಎಸ್ಮೆಯು ಬ್ರೂಗ್ಟ್ಸ್ ಮತ್ತು ಜಿಲ್‌ ರೂರ್ಡ್‌ ಅವರು ತಲಾ ಎರಡು ಗೋಲುಗಳನ್ನು ಗಳಿಸಿದರು. ಜರ್ಮನಿ ತಂಡ 6–0 ಯಿಂದ ಮೊರಕ್ಕೊ ವಿರುದ್ಧ ಗೆದ್ದದ್ದು ಈ ಟೂರ್ನಿಯ ಅತಿದೊಡ್ಡ ಜಯ ಆಗಿತ್ತು. ಇಂಗ್ಲೆಂಡ್‌, ಡೆನ್ಮಾರ್ಕ್ ತೇರ್ಗಡೆ: ಇಂಗ್ಲೆಂಡ್‌ ಮತ್ತು ಡೆನ್ಮಾರ್ಕ್‌ ತಂಡಗಳು ‘ಡಿ’ ಗುಂಪಿನಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದು ನಾಕೌಟ್‌ನಲ್ಲಿ ಸ್ಥಾನ ಗಳಿಸಿತು. ಅಡಿಲೇಡ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ 6–1 ಗೋಲುಗಳಿಂದ ಚೀನಾ ತಂಡವನ್ನು ಮಣಿಸಿದರೆ, ಡೆನ್ಮಾರ್ಕ್‌ 2–0 ಗೋಲುಗಳಿಂದ ಹೈಟಿ ವಿರುದ್ಧ ಗೆದ್ದಿತು. ಮೂರು ಪಂದ್ಯಗಳನ್ನೂ ಗೆದ್ದ ಇಂಗ್ಲೆಂಡ್‌ 9 ಪಾಯಿಂಟ್ಸ್‌ ಗಳಿಸಿತು. ಡೆನ್ಮಾರ್ಕ್‌ ಆರು ಪಾಯಿಂಟ್ಸ್‌ ಸಂಗ್ರಹಿಸಿತು. 16ರ ಘಟ್ಟದ ಪಂದ್ಯಗಳಲ್ಲಿ ಇಂಗ್ಲೆಂಡ್‌ ತಂಡ ನೈಜೀರಿಯಾ ವಿರುದ್ಧವೂ, ಡೆನ್ಮಾರ್ಕ್‌ ತಂಡ ಆತಿಥೇಯ ಆಸ್ಟ್ರೇಲಿಯಾ ಎದುರೂ ಪೈಪೋಟಿ ನಡೆಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.