ಏಷ್ಯನ್ ಗೇಮ್ಸ್‌ಗೆ ಫುಟ್‌ಬಾಲ್ ತಂಡ: ಚೆಟ್ರಿ, ಸಂದೇಶ್, ಗುರುಪ್ರೀತ್‌ಗೆ ಅವಕಾಶ ನವದೆಹಲಿ (ಪಿಟಿಐ): ಅಗ್ರಮಾನ್ಯ ಆಟಗಾರ ಸುನೀಲ್ ಚೆಟ್ರಿ, ರಕ್ಷಣೆ ಆಟಗಾರ ಸಂದೇಶ ಜಿಂಗನ್ ಮತ್ತು ಅಗ್ರಗಣ್ಯ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಅವರು ಮುಂಬರುವ ಏಷ್ಯನ್‌ ಕ್ರೀಡಾಕೂಟಕ್ಕೆ ಮಂಗಳವಾರ ಪ್ರಕಟಿಸಿರುವ 22 ಸದಸ್ಯರ ಫುಟ್‌ಬಾಲ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸೀನಿಯರ್‌ ತಂಡದ ಮುಖ್ಯ ಕೋಚ್‌ ಇಗರ್ ಸ್ಟಿಮ್ಯಾಚ್ ಅವರು ತಂಡದ ಜೊತೆ ಹಾಂಗ್‌ಝೌಗೆ ತೆರಳುವರು. ಭಾರತ ಫುಟ್‌ಬಾಲ್‌ ತಂಡದ ಸ್ಪರ್ಧೆಗೆ ಏಷ್ಯನ್ ಗೇಮ್ಸ್‌ ಸಂಘಟಕರು ಮತ್ತು ಏಷ್ಯ ಒಲಿಂಪಿಕ್ ಕೌನ್ಸಿಲ್‌ ಸಮ್ಮತಿ ನೀಡಿದೆ ಎಂದು ತಿಳಿದುಬಂದಿದೆ. ಈ ಮೊದಲು, ಕ್ರೀಡಾ ಸಚಿವಾಲಯ ನಿಯಮಾವಳಿ ಅನ್ವಯ ಭಾರತ ತಂಡದ ಸ್ಪರ್ಧೆಗೆ ತೊಡಕು ಇತ್ತು. ಏಷ್ಯಾದಲ್ಲಿ ಅಗ್ರ 8ರಲ್ಲಿ ಸ್ಥಾನ ಪಡೆಯುವ ತಂಡಗಳಿಗಷ್ಟೇ ಬಹುರಾಷ್ಟ್ರಗಳ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಲಾಗುತ್ತದೆ. ಆದರೆ ಸಚಿವಾಲಯವು ಇತ್ತೀಚೆಗೆ ಈ ನಿಯಮ ಸಡಿಲಿಸಿ ತಂಡ ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಹಸಿರು ನಿಶಾನೆ ತೋರಿತ್ತು. ಈ ಮಧ್ಯೆ ಸ್ಟಿಮಾಚ್‌ ಅವರೂ ತಂಡ ಭಾಗವಹಿಸಲು ಅನುಮತಿ ನೀಡುವಂತೆ ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಿದ್ದರು. ಏಷ್ಯನ್‌ ಗೇಮ್ಸ್‌ಗೆ ಮೂವರು ಆಟಗಾರರನ್ನು ಬಿಟ್ಟು ಉಳಿದಂತೆ 23 ವರ್ಷದೊಳಗಿನವರು ಮಾತ್ರ ಪಾಲ್ಗೊಳ್ಳಬೇಕಾಗಿದೆ. ಆದರೆ ಈ ಬಾರಿ, ಕ್ರೀಡಾಕೂಟ ಒಂದು ವರ್ಷದ ಮುಂದಕ್ಕೆ ಹೋಗಿರುವುದರಿಂದ ಆಯೋಜಕರು ಜ.1, 1999ರ ನಂತರ ಜನಿಸಿದವರಿಗೆ ಪಾಲ್ಗೊಳ್ಳಲು ಅವಕಾಶ ನೀಡಿದ್ದಾರೆ. ಭಾರತದ ಫುಟ್‌ಬಾಲ್‌ ತಂಡ 2018ರ ಜಕಾರ್ತಾ ಕ್ರೀಡೆಗಳಲ್ಲಿ ಭಾಗವಹಿಸಿರಲಿಲ್ಲ. ತಂಡ ಹೀಗಿದೆ: ಗೋಲ್‌ ಕೀಪರ್ಸ್‌: ಗುರುಪ್ರೀತ್‌ ಸಿಂಗ್ ಸಂಧು, ಗುರ್ಮೀತ್ ಸಿಂಗ್‌, ಧೀರಜ್ ಸಿಂಗ್‌ ಮೊಯಿರಂಗತೆಮ್. ಡಿಫೆಂಡರ್ಸ್‌: ಸಂದೇಶ್ ಜಿಂಗನ್, ಅನ್ವರ್ ಅಲಿ, ನರೆಂದರ್ ಗೆಹಲೋತ್, ಲಾಲ್ಚುಂಗನುಂಗಾ, ಆಕಾಶ್ ಮಿಶ್ರಾ, ರೋಶನ್ ಸಿಂಗ್, ಆಶಿಶ್ ರಾಯ್. ಮಿಡ್‌ಫೀಲ್ಡರ್ಸ್‌: ಜೀಕ್ಸನ್ ಸಿಂಗ್‌ ಥೌನಾವೊಜಾಮ್, ಸುರೇಶ್ ಸಿಂಗ್ ವಾಂಗ್ಜಾಮ್, ಅಪುಯಿಯ ರಾಲ್ಟೆ, ಅಮರಜಿತ್ ಸಿಂಗ್ ಕಿಯಾಮ್, ರಾಹುಲ್ ಕೆ.ಪಿ., ನಾವೊರೆಮ್ ಮಹೇಶ್ ಸಿಂಗ್. ಫಾರ್ವರ್ಡ್ಸ್‌: ಶಿವಶಕ್ತಿ ನಾರಾಯಣನ್, ರಹಿಮ್ ಅಲಿ, ಸುನೀಲ್ ಚೆಟ್ರಿ, ಅನಿಕೇತ್ ಜಾಧವ್, ವಿಕ್ರಮ್ ಪ್ರತಾಪ್ ಸಿಂಗ್, ರೋಹಿತ್ ದನು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.