ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌: ಜರ್ಮನಿಗೆ ಕಗ್ಗಂಟಾದ ಕೊರಿಯಾ ಬ್ರಿಸ್ಬೇನ್‌ (ಎಎಫ್‌ಪಿ): ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಇತಿಹಾಸದಲ್ಲೇ ಜರ್ಮನಿ ತಂಡ ಮೊದಲ ಬಾರಿ ಗ್ರೂಪ್‌ ಹಂತದಲ್ಲೇ ಹೊರಬಿದ್ದಿತು. ಗುರುವಾರ ನಡೆದ ‘ಎಚ್‌’ ಗುಂಪಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾ ಎದುರು 1–1 ಡ್ರಾಕ್ಕೇ ಸೀಮಿತಗೊಳ್ಳುವ ಮೂಲಕ ಜರ್ಮನಿ ಹತಾಶೆ ಅನುಭವಿಸಿತು. ಇನ್ನೊಂದೆಡೆ, ವಿಶ್ವಕಪ್‌ನಲ್ಲಿ ಮೊದಲ ಬಾರಿ ಆಡುತ್ತಿರುವ ಮೊರಾಕ್ಕೊ ಪರ್ತ್‌ನಲ್ಲಿ ನಡೆದ ತನ್ನ ಕೊನೆಯ ಪಂದ್ಯದಲ್ಲಿ ಕೊಲಂಬಿಯಾಕ್ಕೆ 1–0 ಯಿಂದ ಸೋಲುಣಿಸಿದ ಕಾರಣ ಜರ್ಮನಿಗೆ ನಾಕೌಟ್‌ ಬಾಗಿಲು ಸಂಪೂರ್ಣವಾಗಿ ಮುಚ್ಚಿತು. ಮೊರಾಕ್ಕೊ ಪಂದ್ಯ ಡ್ರಾ ಆದರೂ ಜರ್ಮನಿಗೆ ನಾಕೌಟ್‌ ಅವಕಾಶವಿತ್ತು. ‘ಎಚ್‌’ ಗುಂಪಿನಲ್ಲಿ ಕೊಲಂಬಿಯಾ ಮತ್ತು ಮೊರಾಕ್ಕೊ ಮೂರು ಪಂದ್ಯಗಳಿಂದ ತಲಾ ಆರು ಪಾಯಿಂಟ್ಸ್‌ ಸಂಗ್ರಹಿಸಿ (ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದೊಡನೆ) ನಾಕೌಟ್‌ಗೆ ಮುನ್ನಡೆದವು. ನಾಲ್ಕು ಪಾಯಿಂಟ್ಸ್‌ ಪಡೆದ ಜರ್ಮನಿ ತವರಿಗೆ ಮರಳಬೇಕಾಗಿದೆ. ಕೊರಿಯಾ (1 ಪಾಯಿಂಟ್‌) ಕೊನೆಯ ಸ್ಥಾನ ಗಳಿಸಿತು. 2003 ಮತ್ತು 2007ರಲ್ಲಿ ಚಾಂಪಿಯನ್ನರಾಗಿದ್ದ ಜರ್ಮನಿ ವನಿತೆಯರು, ಕಳೆದ ವರ್ಷ ಯುರೋಪಿಯನ್ ಚಾಂಪಿಯನ್‌ಷಿಪ್‌ ಫೈನಲ್‌ ಪ್ರವೇಶಿಸಿದ್ದು, ಈ ಟೂರ್ನಿಗೆ ಬರುವಾಗ ಪ್ರಶಸ್ತಿಗೆ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದ್ದರು. ಜರ್ಮನಿ ಮುಂದಿನ ಹಂತಕ್ಕೆ ತೇರ್ಗಡೆ ಆಗಬೇಕಾಗಿದ್ದರೆ ಕೊರಿಯಾ ಮೇಲೆ ಗೆಲ್ಲಲೇಬೇಕಿತ್ತು. ಆದರೆ, ಪಂದ್ಯದ ಆರನೇ ನಿಮಿಷ ಚೊ ಸೂ ಹ್ಯೂನ್‌ ಗಳಿಸಿದ ಗೋಲಿನ ಮೂಲಕ ಕೊರಿಯಾ ಮುನ್ನಡೆಯಿತು. ನಂತರ ತನ್ನ ಗಮನನ್ನೆಲ್ಲಾ ರಕ್ಷಣೆಯತ್ತಲೇ ಹರಿಸಿ, ಜರ್ಮನಿ ಆಟಗಾರ್ತಿಯರಿಗೆ ಹತಾಶೆ ಮೂಡಿಸಿತು. ಮಧ್ಯಂತರಕ್ಕೆ ಮೂರು ನಿಮಿಷಗಳಿರುವಾಗ ನಾಯಕಿ ಅಲೆಕ್ಸಾಂಡ್ರಾ ಪೊಪ್‌ ಮೂಲಕ ಜರ್ಮನಿ ಸ್ಕೋರ್‌ ಸಮ ಮಾಡಿಕೊಂಡಿತು. ಆದರೆ ಉಳಿದ ಅವಧಿಯಲ್ಲಿ ನಿರ್ಣಾಯಕ ಗೋಲು ಗಳಿಸಲು ಆ ತಂಡಕ್ಕೆ ಸಾಧ್ಯವಾಗಲಿಲ್ಲ. ಈ ಬಾರಿ ಪ್ರಬಲ ತಂಡಗಳಾದ ಬ್ರೆಜಿಲ್‌, ಜರ್ಮನಿ, ಇಟಲಿ, ಒಲಿಂಪಿಕ್ ಚಾಂಪಿಯನ್‌ ಕೆನಡಾ, ನಾಕೌಟ್‌ಗೆ ಮೊದಲೇ ಗಂಟುಮೂಟೆ ಕಟ್ಟಬೇಕಾಯಿತು. ಕೊಲಂಬಿಯಾ 16ರ ಘಟ್ಟದಲ್ಲಿ ಜಮೈಕಾ ವಿರುದ್ಧ ಆಡಲಿದೆ. ಮೊರಾಕ್ಕೊ ಇನ್ನೊಂದೆಡೆ ಫ್ರಾನ್ಸ್‌ ತಂಡವನ್ನು ಎದುರಿಸಲಿದೆ. ಮೊರಾಕ್ಕೊಗೆ ಜಯ: ಅನಿಸ್ಸಾ ಲಮ್ಹಾರಿ ಅವರು ಪೂರ್ವಾಧದ ಕೊನೆಯಲ್ಲಿ ಗಳಿಸಿದ ಗೋಲಿನಿಂದ ಮೊರಾಕ್ಕೊ ತಂಡ, ಕೊಲಂಬಿಯಾ ಮೇಲೆ ಜಯಗಳಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.