ಬಿಎಫ್‌ಸಿ ಸೇರಿದ ರ್‍ಯಾನ್‌ ವಿಲಿಯಮ್ಸ್ ಬೆಂಗಳೂರು: ಆಸ್ಟ್ರೇಲಿಯಾದ ಸ್ಟ್ರೈಕರ್‌ ರ್‍ಯಾನ್‌ ವಿಲಿಯಮ್ಸ್‌ ಅವರು ಒಂದು ವರ್ಷದ ಅವಧಿಗೆ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡವನ್ನು ಸೇರಿಕೊಂಡಿದ್ದಾರೆ. 2023–24ರ ಋತುವಿಗೆ ಮುನ್ನ ತನ್ನ ಫಾರ್ವರ್ಡ್‌ ವಿಭಾಗವನ್ನು ಬಲಪಡಿಸುವ ನಿಟ್ಟಿನಲ್ಲಿ ಬಿಎಫ್‌ಸಿ ಈ ಹೆಜ್ಜೆಯಿಟ್ಟಿದೆ. ಬೆಂಗಳೂರಿನ ತಂಡ ಕಳೆದ ವಾರ ಇಂಗ್ಲೆಂಡ್‌ನ ಸ್ಟ್ರೈಕರ್‌ ಕರ್ಟಿಸ್‌ ಮೇನ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ರ್‍ಯಾನ್‌ ಅವರು ಈಚೆಗೆ ಆಸ್ಟ್ರೇಲಿಯಾದ ಎ–ಲೀಗ್‌ನಲ್ಲಿ ಪರ್ತ್‌ ಗ್ಲೋರಿ ತಂಡದ ಪರ ಆಡಿದ್ದರು. 29 ವರ್ಷದ ಅವರು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ಹಲವು ಕ್ಲಬ್‌ಗಳನ್ನು ಪ್ರತಿನಿಧಿಸಿದ್ದಾರೆ. ಆಸ್ಟ್ರೇಲಿಯಾದ 20 ಮತ್ತು 23 ವರ್ಷ ವಯಸ್ಸಿನೊಳಗಿನವರ ರಾಷ್ಟ್ರೀಯ ತಂಡದಲ್ಲೂ ಆಡಿದ್ದರು. ‘ರ‍್ಯಾನ್‌ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಸಂತಸ ಉಂಟುಮಾಡಿದೆ. ಫಾರ್ವರ್ಡ್‌ ಮಾತ್ರವಲ್ಲದೆ, ಮಿಡ್‌ಫೀಲ್ಡ್‌ನಲ್ಲೂ ಆಡುವ ಸಾಮರ್ಥ್ಯ ಅವರಿಗಿದೆ. ಇಂಗ್ಲೆಂಡ್‌ನ ಕ್ಲಬ್‌ಗಳಲ್ಲಿ ಆಡುತ್ತಿದ್ದಾಗಲೇ ನಾನು ಅವರ ಬಗ್ಗೆ ತಿಳಿದುಕೊಂಡಿದ್ದೆ’ ಎದು ಬಿಎಫ್‌ಸಿ ಕೋಚ್‌ ಸೈಮನ್‌ ಗ್ರೇಸನ್‌ ಹೇಳಿದ್ದಾರೆ. 7ನೇ ಸಂಖ್ಯೆಯ ಪೋಷಾಕು ಧರಿಸಿ ಆಡಲಿರುವ ಅವರು, ಈ ಋತುವಿನ ಆರಂಭಕ್ಕೆ ಮುನ್ನವೇ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.