ಪುಟ್‌ಬಾಲ್‌: ಡ್ರಾ ಸಾಧಿಸಿದ ಬಿಯುಎಫ್‌ಸಿ ಬೆಂಗಳೂರು: ಬೆಂಗಳೂರು ಯುನೈಟೆಡ್‌ ಫುಟ್‌ಬಾಲ್‌ ಕ್ಲಬ್‌ (ಬಿಯುಎಫ್‌ಸಿ) ತಂಡದವರು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 2–2ರಿಂದ ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌.ಸಿ ತಂಡದವರೊಂದಿಗೆ ಡ್ರಾ ಸಾಧಿಸಿದರು. ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬಿಯುಎಫ್‌ಸಿ ತಂಡವು ಮೊದಲಾರ್ಧದಲ್ಲಿ ಪಾಬಲ್ಯ ಸಾಧಿಸಿತು. ಪ್ರಾಣೇಂದ್ರ ಸಿಂಗ್ ಠಾಕೂರ್ 2ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು. ಅದೇ ತಂಡದ ನೌರೋಬಾಮ್ ಪ್ರೇಮ್‌ಜಿತ್ ಸಿಂಗ್ (45ನೇ) ಮತ್ತೊಂದು ಗೋಲು ತಂದಿತ್ತು, ಮುನ್ನಡೆ ಹೆಚ್ಚಿಸಿದರು. ಆದರೆ, ದ್ವಿತೀಯಾರ್ಧದಲ್ಲಿ ಪುಟಿದೆದ್ದ ಸ್ಟೂಡೆಂಟ್ಸ್‌ ಯೂನಿಯನ್‌ ತಂಡ, ಆದಿತ್ಯ ಪ್ರತಾಪ್ ಸಿಂಗ್ ರಾಥೋಡ್ (69ನೇ), ಪ್ರತೀಕ್ ಸ್ವಾಮಿ (86ನೇ) ಅವರು ತಂದಿತ್ತ ಗೋಲಿನ ನೆರವಿನಿಂದ ಸಮಬಲ ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ರೂಟ್ಸ್‌ ಎಫ್‌.ಸಿ ತಂಡವು 2–2ರಿಂದ ಕೊಡಗು ಎಫ್‌.ಸಿ ತಂಡದೊಂದಿಗೆ ಡ್ರಾ ಸಾಧಿಸಿತು. ರೂಟ್ಸ್‌ ತಂಡದ ಪಿ. ಶಿಬಿನ್ (18ನೇ), ಗಾಡ್ವಿನ್ ಜಾನ್ಸನ್ (35ನೇ) ತಲಾ ಒಂದು ಗೋಲು ದಾಖಲಿಸಿ ಮೊದಲಾರ್ಧದಲ್ಲಿ ತಂಡಕ್ಕೆ ಮುನ್ನಡೆ ಒದಗಿಸಿದರು. ದ್ವಿತೀಯಾರ್ಧದಲ್ಲಿ ಶ್ಲೋಕ್‌ ತಿವಾರಿ (74 ಮತ್ತು 86ನೇ) ಎರಡು ಬಾರಿ ಚೆಂಡನ್ನು ಗುರಿ ಸೇರಿಸಿ, ಕೊಡಗು ತಂಡದ ಗೋಲನ್ನು ಸಮಬಲಗೊಳಿಸಿದರು. ಇಂದಿನ ಪಂದ್ಯಗಳು ಎಫ್‌ಸಿ ಡೆಕ್ಕನ್‌– ಎಂಇಜಿ ಅಂಡ್‌ ಸೆಂಟರ್‌ ಎಫ್‌ಸಿ (ಮಧ್ಯಾಹ್ನ 1.30) ಸ್ಟೋರ್ಟಿಂಗ್‌ ಕ್ಲಬ್‌ ಬೆಂಗಳೂರು– ಎಚ್‌ಎಎಲ್‌ ಎಫ್‌ಸಿ (ಮಧ್ಯಾಹ್ನ 3.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.