ಸ್ಟಿಮಾಚ್‌ಗೆ ನೋಟಿಸ್‌ ನೀಡಿದ ಎಐಎಫ್‌ಎಫ್‌ ನವದೆಹಲಿ (ಪಿಟಿಐ): ಭಾರತ ಸೀನಿಯರ್‌ ತಂಡದ ಹೆಡ್ ಕೋಚ್‌ ಇಗೊರ್ ಸ್ಟಿಮಾಚ್ ಅವರಿಗೆ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಶನಿವಾರ ಷೋಕಾಸ್ ನೋಟಿಸ್ ಜಾರಿ ಮಾಡಿದೆ. ಅವರು ಮಾಡಿರುವ ಟೀಕೆಯಿಂದ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಈ ಕ್ರಮ ಕೈಗೊಳ್ಳಲಾಗಿದೆ. ಏಷ್ಯನ್‌ ಗೇಮ್ಸ್‌ ಸಿದ್ಧತೆಗಾಗಿ ನಡೆಯುತ್ತಿರುವ ರಾಷ್ಟ್ರೀಯ ಶಿಬಿರಕ್ಕೆ ಆಟಗಾರರನ್ನು ಬಿಟ್ಟುಕೊಡದ ಕೆಲವು ಐಎಸ್‌ಎಲ್‌ ಕ್ಲಬ್‌ಗಳ ನಡೆಗೆ ಸ್ಟಿಮಾಚ್‌ ಆಕ್ರೋಶ ವ್ಯಕ್ತಪಡಿಸಿದ್ದು, ‘ಭಾರತದ ಫುಟ್‌ಬಾಲ್‌ಗೆ ತಮ್ಮ ನೆರವು ಬೇಕಾದರೆ ಸತ್ಯಹೇಳಬೇಕಾಗುವುದು ತಮಗೆ ಅನಿವಾರ್ಯ ಆಗುತ್ತದೆ’ ಎಂದು ಹೇಳಿದ್ದರು. ಕ್ರೊವೇಷ್ಯಾದ ಮಾಜಿ ಡಿಫೆಂಡರ್‌ ಅವರ ಬಹಿರಂಗವಾಗಿ ಹೇಳಿಕೆ ನೀಡಿದ್ದು ಎಐಎಫ್‌ಎಫ್‌ನ ಉನ್ನತ ಅಧಿಕಾರವರ್ಗಕ್ಕೆ ರುಚಿಸಿಲ್ಲ ಎನ್ನಲಾಗಿದ್ದು, ಇದಕ್ಕೆ ಕೋಚ್‌ ಅವರಿಂದ ಸ್ಪಷ್ಟನೆ ಕೇಳಿದ್ದಾರೆ. ‘ಇದು ನಿನ್ನೆ–ಮೊನ್ನೆಯ ಹೇಳಿಕೆಗೆ ಸಂಬಂಧಿಸಿದ್ದಲ್ಲ. ಕೆಲವು ದಿನಗಳಿಂದ ಅವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎಐಎಫ್‌ಎಫ್‌ ಜೊತೆ ಮಾಡಿರುವ ಒಪ್ಪಂದದ ಕರಾರು ಮುರಿಯುತ್ತಿದ್ದಾರೆ. ಅವರಿಗೆ ಏನಾದರೂ ಸಮಸ್ಯೆಯಿದ್ದರೆ ಬಹಿರಂಗ ಹೇಳಿಕೆ ನೀಡುವ ಬದಲು ನಮ್ಮ ಜೊತೆ ಚರ್ಚಿಸಬಹುದಿತ್ತು. ನೋಟಿಸ್‌ಗೆ ಅವರು ಏನು ಉತ್ತರ ಕೊಡುತ್ತಾರೆ ಎನ್ನುವುದನ್ನು ನೋಡಿ ಚರ್ಚಿಸುತ್ತೇವೆ’ ಎಂದು ಫೆಡರೇಷನ್‌ ಮೂಲವೊಂದು ಪಿಟಿಐಗೆ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.