ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌: ಚೊಚ್ಚಲ ಫೈನಲ್‌ಗೆ ಸ್ಪೇನ್‌ ಆಕ್ಲೆಂಡ್‌ (ಎಎಫ್‌ಪಿ): ಓಲ್ಗಾ ಕರ್ಮೋನಾ ಅವರು ಪಂದ್ಯ ಕೊನೆಗೊಳ್ಳಲು ಕೆಲವೇ ನಿಮಿಷಗಳಿರುವಾಗ ಗಳಿಸಿದ ಗೋಲಿನ ನೆರವಿನಿಂದ ಸ್ವೀಡನ್‌ ತಂಡಕ್ಕೆ ಆಘಾತ ನೀಡಿದ ಸ್ಪೇನ್‌, ಫಿಫಾ ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್‌ ಪ್ರವೇಶಿಸಿತು. ಆಕ್ಲೆಂಡ್‌ನ ಈಡನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸೆಮಿಫೈನಲ್‌ ಪಂದ್ಯವನ್ನು ಸ್ಪೇನ್‌ 2–1 ಗೋಲುಗಳಿಂದ ಗೆದ್ದುಕೊಂಡು ಇದೇ ಮೊದಲ ಬಾರಿ ಫೈನಲ್‌ಗೆ ಲಗ್ಗೆಯಿಟ್ಟಿತು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಕರ್ಮೋನಾ ಬಳಗ ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ. ಆರಂಭದಿಂದಲೂ ಪ್ರಬಲ ಪೈಪೋಟಿ ನಡೆದ ಸೆಮಿಫೈನಲ್‌ ಪಂದ್ಯದ ಮೂರೂ ಗೋಲುಗಳು ಕೊನೆಯ 10 ನಿಮಿಷಗಳಲ್ಲಿ ಬಂದವು. ಪಂದ್ಯ ಇನ್ನೇನು ಹೆಚ್ಚುವರಿ ಅವಧಿಗೆ ವಿಸ್ತರಿಸಲಿದೆ ಎನ್ನುವಷ್ಟರಲ್ಲಿ ಸಲ್ಮಾ ಪರಲುಯೆಲೊ (81ನೇ ನಿ.) ಅವರು ಸ್ಪೇನ್‌ಗೆ ಮುನ್ನಡೆ ತಂದಿತ್ತರು. ಮರುಹೋರಾಟ ನಡೆಸಿದ ಸ್ವೀಡನ್‌ ತಂಡಕ್ಕೆ ರೆಬೆಕಾ ಬ್ಲೋಮ್‌ಕ್ವಿಸ್ಟ್‌ (88ನೇ ನಿ.) ಸಮಬಲದ ಗೋಲು ತಂದಿತ್ತರು. ಇದರಿಂದ ಪಂದ್ಯದ ರೋಚಕತೆ ಹೆಚ್ಚಿತು. ಗೆಲುವಿನ ಗೋಲಿಗಾಗಿ ಉಭಯ ತಂಡಗಳೂ ಜಿದ್ದಿನಿಂದ ಹೋರಾಡಿದವು. 89ನೇ ನಿಮಿಷದಲ್ಲಿ ಫುಲ್‌ಬ್ಯಾಕ್‌ ಆಟಗಾರ್ತಿ ಕರ್ಮೋನಾ ಅವರಿಂದ ಗೆಲುವಿನ ಗೋಲು ದಾಖಲಾಯಿತು. ಕಾರ್ನರ್‌ ಕಿಕ್‌ನಲ್ಲಿ ಲಭಿಸಿದ ಚೆಂಡನ್ನು ಗೋಲು ವಲಯದ ಅಲ್ಪ ಹೊರಭಾಗದಲ್ಲಿ ನಿಯಂತ್ರಣಕ್ಕೆ ತೆಗೆದುಕೊಂಡ ಕರ್ಮೋನಾ ಸೊಗಸಾದ ರೀತಿಯಲ್ಲಿ ಗುರಿ ಸೇರಿಸಿದರು. ಅವರು ಒದ್ದ ಚೆಂಡು ಸ್ವೀಡನ್‌ ಗೋಲ್‌ಕೀಪರ್‌ ಜೆಸಿರಾ ಮುಸೋವಿಚ್‌ ಅವರನ್ನು ದಾಟಿಕೊಂಡು ಕ್ರಾಸ್‌ಬಾರ್‌ಗೆ ಬಡಿದು ಗೋಲುಲೈನ್‌ ಒಳಗೆ ಬಿತ್ತು. ಸ್ಪೇನ್‌ ಆಟಗಾರ್ತಿಯರು ಚೊಚ್ಚಲ ಫೈನಲ್‌ ಪ್ರವೇಶದ ಸಂಭ್ರಮ ಆಚರಿಸಿದರೆ, ನಾಲ್ಕರಘಟ್ಟದಲ್ಲಿ ಮತ್ತೊಮ್ಮೆ ಎಡವಿದ ಸ್ವೀಡನ್‌ ಆಟಗಾರ್ತಿಯರು ನಿರಾಸೆಗೆ ಒಳಗಾದರು. ಈ ತಂಡ ಕಳೆದ ನಾಲ್ಕು ವಿಶ್ವಕಪ್‌ ಟೂರ್ನಿಗಳಲ್ಲಿ ಮೂರನೇ ಬಾರಿ ಸೆಮಿಯಲ್ಲಿ ಸೋತು ಹೊರಬಿದ್ದಿತು. ಮಾತ್ರವಲ್ಲ, ಕಳೆದ ವರ್ಷ ನಡೆದಿದ್ದ ಯೂರೋಪಿಯನ್‌ ಚಾಂಪಿಯನ್‌ಷಿಪ್‌ನಲ್ಲೂ ಸೆಮಿಯಲ್ಲಿ ಎಡವಿತ್ತು. ಟೋಕಿಯೊ ಒಲಿಂಪಿಕ್ಸ್‌ ಫೈನಲ್‌ನಲ್ಲಿ ಕೆನಡಾ ಎದುರು ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು. ಸ್ಪೇನ್‌ ತಂಡ ಈ ಹಿಂದೆ ಒಮ್ಮೆಯೂ ವಿಶ್ವಕಪ್‌ನಲ್ಲಿ 16ರ ಘಟ್ಟ ದಾಟಿರಲಿಲ್ಲ. ಈ ಬಾರಿ ಪ್ರಶಸ್ತಿ ಸುತ್ತು ತಲುಪಿದ್ದು, ಐತಿಹಾಸಿಕ ಸಾಧನೆಯ ಹೊಸ್ತಿಲಲ್ಲಿದೆ. ಇಂದಿನ ಪಂದ್ಯ ಆಸ್ಟ್ರೇಲಿಯಾ– ಇಂಗ್ಲೆಂಡ್‌ (ಆರಂಭ: ಮಧ್ಯಾಹ್ನ 3.30) ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌ ನೆಟ್‌ವರ್ಕ್ - ಆಸ್ಟ್ರೇಲಿಯಾ– ಇಂಗ್ಲೆಂಡ್‌ ಸೆಣಸು ಸಿಡ್ನಿಯಲ್ಲಿ ಬುಧವಾರ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ನ ಸವಾಲು ಎದುರಿಸಲಿದೆ. ಉಭಯ ತಂಡಗಳು ಚೊಚ್ಚಲ ಫೈನಲ್‌ ಪ್ರವೇಶದ ಗುರಿಯೊಂದಿಗೆ ಕಣಕ್ಕಿಳಿಯಲಿದೆ. ಕಳೆದ ಎರಡು ಟೂರ್ನಿಗಳಲ್ಲಿ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದಿದ್ದ ಇಂಗ್ಲೆಂಡ್‌ ಈ ಬಾರಿ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಆದರೆ ತವರು ಪ್ರೇಕ್ಷಕರ ಬೆಂಬಲದೊಂದಿಗೆ ಆಡಲಿರುವ ಆಸ್ಟ್ರೇಲಿಯಾ ತಂಡವನ್ನು ಮಣಿಸುವುದು ಸುಲಭವಲ್ಲ ಎಂಬುದರ ಅರಿವು ಕೂಡಾ ಇಂಗ್ಲೆಂಡ್‌ ತಂಡಕ್ಕಿದೆ. ಈ ಪಂದ್ಯ ವೀಕ್ಷಿಸಲು ಸಿಡ್ನಿ ಮೈದಾನದಲ್ಲಿ 75 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಸೇರುವ ನಿರೀಕ್ಷೆಯಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.