ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌: ಆಸ್ಟ್ರೇಲಿಯಾ ಕನಸು ಭಗ್ನಗೊಳಿಸಿದ ಇಂಗ್ಲೆಂಡ್‌ ಸಿಡ್ನಿ: ಇಂಗ್ಲೆಂಡ್ ತಂಡದ ಲಾರೆನ್‌ ಹೆಂಪ್ ಮತ್ತು ಆಲಿಸಿಯಾ ರುಸೊ ಅವರು ಕೊನೆಗಳಿಗೆಯಲ್ಲಿ ತೋರಿದ ಅಮೋಘ ಪ್ರದರ್ಶನದಿಂದ, ಆತಿಥೇಯ ಆಸ್ಟ್ರೇಲಿಯಾ ಕನಸು ನುಚ್ಚುನೂರಾಯಿತು. ಬುಧವಾರ ನಡೆದ ಮಹಿಳಾ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ನಿರ್ದಯ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡ 3–1 ಗೋಲುಗಳಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತು. ಇಂಗ್ಲೆಂಡ್‌ ಭಾನುವಾರ ನಡೆಯುವ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಆಡಲಿದೆ. ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡಕ್ಕೆ ಆಡುವ ಇಲಾ ಟೂನ್, ವಿರಾಮಕ್ಕೆ 9 ನಿಮಿಷಗಳಿರುವಾಗ ಇಂಗ್ಲೆಂಡ್ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಅವರು ಬಲವಾಗಿ ಒದ್ದ ಚೆಂಡು ಶರವೇಗದಲ್ಲಿ ಗೋಲಿನೊಳಕ್ಕೆ ಸೇರಿತು. ಆದರೆ, ಗಾಯದಿಂದ ಚೇತರಿಸಿಕೊಂಡು ಮೊದಲ ಸಲ ಕಾಂಗರೂ ಪಡೆಗೆ ಮರಳಿದ ಸ್ಟಾರ್‌ ಆಟಗಾರ್ತಿ ಸ್ಯಾಮ್ ಕೆರ್‌, ಉತ್ತರಾರ್ಧದಲ್ಲಿ ಗಳಿಸಿದ ಅಮೋಘ ಗೋಲಿನಿಂದ ಪಂದ್ಯಕ್ಕೆ ಕಳೆಯೇರಿತು. 63ನೇ ನಿಮಿಷ, ಎದುರಾಳಿ ತಂಡದ ರಕ್ಷಣಾ ಆಟಗಾರ್ತಿಯರನ್ನು ವಂಚಿಸಿ ಅವರು 30 ಯಾರ್ಡ್‌ ದೂರದಿಂದ ಒದ್ದ ಚೆಂಡು ಗುರಿಸೇರಿತು. ಆದರೆ ತವರು ತಂಡವನ್ನು ಹುರಿದುಂಬಿಸುತ್ತಿದ್ದ ಪ್ರೇಕ್ಷಕರ ಸಂತಸ ಎಂಟು ನಿಮಿಷಗಳಲ್ಲೇ ಕರಗಿತು. ಹೆಂಪ್‌ ಗಳಿಸಿದ ಗೋಲಿನಿಂದ ಇಂಗ್ಲೆಂಡ್ ಮತ್ತೆ ಮುನ್ನಡೆಯಿತು. ಬಾಕ್ಸ್‌ ತುದಿಯಿಂದ ಅವರು ಒದ್ದ ಚೆಂಡು ಗೋಲಿನ ಮೂಲೆ ಸೇರಿತು. ಪಂದ್ಯ ಮುಗಿಯಲು ನಾಲ್ಕು ನಿಮಿಷಗಳಿರುವಾಗ ರುಸೊ, ಇಂಗ್ಲೆಂಡ್‌ ಪಾಳೆಯದಲ್ಲಿ ಸಂತಸದ ಅಲೆಗಳನ್ನೆಬ್ಬಿಸಿದರು. ‌‘ನಾವು ಫೈನಲ್ ತಲುಪಿದ್ದೇವೆ. ನಂಬಲು ಕಷ್ಟವಾಬುತ್ತಿದೆ. ನಾವೇ ಟೂರ್ನಿ ಗೆದ್ದ ಭಾವನೆ ಮೂಡಿದೆ. ಆದರೆ ನಾವಿನ್ನೂ (ವಿಶ್ವಕಪ್‌) ಗೆದ್ದಿಲ್ಲ. ಪಂದ್ಯವನ್ನು ಗೆದ್ದೆವಷ್ಟೇ’ ಎಂದು ಇಂಗ್ಲೆಂಡ್ ಕೋಚ್‌ ಸರಿನಾ ವೀಗ್ಮನ್ ಪ್ರತಿಕ್ರಿಯಿಸಿದರು. ಇಂಗ್ಲೆಂಡ್‌ಗೆ ಇನ್ನು ಸ್ಪೇನ್‌ ಸವಾಲು ಎದುರಿಸಬೇಕಾಗಿದೆ. ಸ್ಪೇನ್ ತಂಡ ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಅಪಾಯಕಾರಿ ಸ್ವೀಡನ್ ತಂಡವನ್ನು 2–1 ಗೋಲುಗಳಿಂದ ಸೋಲಿಸಿತ್ತು. ಹೀಗಾಗಿ ಈ ಬಾರಿ ಗೆಲ್ಲುವ ತಂಡ ಮೊದಲ ಬಾರಿ ಟ್ರೋಫಿ ಗೆದ್ದಂತೆ ಆಗಲಿದೆ. ಇಂಗ್ಲೆಂಡ್‌ ಈ ಹಿಂದೆ ಎರಡು ಬಾರಿ– 2015 ಮತ್ತು 2019ರಲ್ಲಿ ಫೈನಲ್‌ ತಲುಪಿತ್ತು. ಎರಡೂ ಸಂದರ್ಭಗಳಲ್ಲಿ 2–1 ರಿಂದ ಸೋಲುಂಡಿತ್ತು. ಆಸ್ಟ್ರೇಲಿಯಾ ಸೋಲನುಭವಿಸಿದರೂ ವಿಶ್ವಕಪ್‌ನಲ್ಲಿ ತನ್ನ ಶ್ರೇಷ್ಠ ಪ್ರದರ್ಶನವನ್ನು ಇಲ್ಲಿ ದಾಖಲಿಸಿತು. ಅದು ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಶನಿವಾರ ಸ್ವೀಡನ್‌ ವಿರುದ್ಧ ಆಡಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.