ಫುಟ್‌ಬಾಲ್‌: ಎಎಸ್‌ಸಿಗೆ ಗೆಲುವು ಬೆಂಗಳೂರು: ಎಎಸ್‌ಸಿ ಸೆಂಟರ್‌ ಎಫ್‌ಸಿ ತಂಡದವರು ರಾಜ್ಯ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ 2–1 ಗೋಲುಗಳಿಂದ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡವನ್ನು ಮಣಿಸಿದರು. ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಗೋಲು ಗಳಿಸಿದ ಜೇಕಬ್‌ ವನಲ್ (31ನೇ ನಿ.) ಮತ್ತು ದೀಪ್‌ ಮಜುಮ್ದಾರ್‌ (35) ಅವರು ಎಎಸ್‌ಸಿ ಗೆಲುವಿನಲ್ಲಿ ಗಮನ ಸೆಳೆದರು. ಜೆರ‍್ರಿ ಒನೆಸೆಮಸ್‌ ಅವರು 17ನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಮುನ್ನಡೆ ಸಾಧಿಸಿದ್ದ ಬೆಂಗಳೂರು ಯುನೈಟೆಡ್‌ ತಂಡ, ಆ ಬಳಿಕ ಆಟದ ಮೇಲಿನ ಹಿಡಿತ ಕೈಬಿಟ್ಟಿತು. ದಿನದ ಮತ್ತೊಂದು ಪಂದ್ಯದಲ್ಲಿ ಕಿಕ್‌ಸ್ಟಾರ್ಟ್‌ ಎಫ್‌ಸಿ 3–1 ಗೋಲುಗಳಿಂದ ಚಿಕ್ಕಮಗಳೂರು ಎಫ್‌ಸಿ ತಂಡವನ್ನು ಮಣಿಸಿತು. ಅಭಿಷೇಕ್‌ ಶಂಕರ್‌ ಪವಾರ್‌ (32), ಏನಮ್ ಗ್ರಫೆನ್‌ಬರ್ಗ್‌ ಜುರ್ವಾ (22) ಮತ್ತು ಜಾಕ್ಸನ್‌ ದಾಸ್ (35) ಅವರು ಕಿಕ್‌ಸ್ಟಾರ್ಟ್‌ ಪರ ಚೆಂಡನ್ನು ಗುರಿ ಸೇರಿಸಿದರು. ಚಿಕ್ಕಮಗಳೂರು ತಂಡಕ್ಕೆ ಮಯೂರ್ (90+3) ಗೋಲು ಗಳಿಸಿದರು. ಸೋಮವಾರ ನಡೆಯುವ ಪಂದ್ಯಗಳಲ್ಲಿ ಬಿಎಫ್‌ಸಿ– ಬೆಂಗಳೂರು ಡ್ರೀಮ್‌ ಯುನೈಟೆಡ್‌ ಹಾಗೂ ಸೌತ್‌ ಯುನೈಟೆಡ್‌ ಎಫ್‌ಸಿ– ರೂಟ್ಸ್‌ ಎಫ್‌ಸಿ ತಂಡಗಳು ಎದುರಾಗಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.