ಫುಟ್‌ಬಾಲ್‌: ಮಲೇಷ್ಯಾಕ್ಕೆ ಮಣಿದ ಭಾರತ ಕ್ವಾಲಾಲಂಪುರ: ಮಲೇಷ್ಯಾ ಎದುರು 2–4 ಗೋಲುಗಳಿಂದ ಸೋತ ಭಾರತ ತಂಡ, ಮೆರ್ಡೆಕಾ ಕಪ್‌ ಫುಟ್‌ಬಾಲ್‌ ಟೂರ್ನಿಯಿಂದ ಹೊರಬಿತ್ತು. ಶುಕ್ರವಾರ ನಡೆದ ಪಂದ್ಯದ ಏಳನೇ ನಿಮಿಷದಲ್ಲಿ ಡಿಯೊನ್‌ ಕೂಲ್ಸ್‌ ಅವರು ಮಲೇಷ್ಯಾಕ್ಕೆ ಮುನ್ನಡೆ ತಂದಿತ್ತರೆ, ನೊರೆಮ್‌ ಮಹೇಶ್‌ ಸಿಂಗ್‌ 13ನೇ ನಿಮಿಷದಲ್ಲಿ ಗೋಲು ಗಳಿಸಿ ಪಂದ್ಯವನ್ನು ಸಮಸ್ಥಿತಿಗೆ ತಂದರು. 20ನೇ ನಿಮಿಷದಲ್ಲಿ ಮಲೇಷ್ಯಾ ತಂಡಕ್ಕೆ ಲಭಿಸಿದ ಪೆನಾಲ್ಟಿಯನ್ನು ಆರಿಫ್‌ ಅಮೀನ್ ಗೋಲಾಗಿ ಪರಿವರ್ತಿಸಿದರು. ವಿರಾಮಕ್ಕೆ ನಾಲ್ಕು ನಿಮಿಷಗಳಿರುವಾಗ ಫೈಸಲ್‌ ಹಲೀಮ್‌ ಅವರು ಆತಿಥೇಯರ ಮುನ್ನಡೆಯನ್ನು 3–1ಕ್ಕೆ ಹೆಚ್ಚಿಸಿದರು. ನಾಯಕ ಸುನಿಲ್‌ ಚೆಟ್ರಿ 52ನೇ ನಿಮಿಷದಲ್ಲಿ ಗೋಲು ಗಳಿಸಿ ಹಿನ್ನಡೆಯನ್ನು 2–3ಕ್ಕೆ ತಗ್ಗಿಸಿದರು. 57ನೇ ನಿಮಿಷದಲ್ಲಿ ಲಾಲ್‌ಲಿಯಾನ್‌ಜುವಾಲ ಚಾಂಗ್ಟೆ ಗೋಲು ಗಳಿಸಿದರೂ, ರೆಫರಿ ಅದನ್ನು ಮಾನ್ಯ ಮಾಡಲಿಲ್ಲ. ಚೆಂಡು ಗೋಲು ಲೈನ್‌ ದಾಟಿದ ಬಳಿಕ, ಡಿಯೊನ್‌ ಹೊರಕ್ಕಟ್ಟಿದ್ದರು. ರೀಪ್ಲೆನಲ್ಲೂ ಅದು ಸ್ಪಷ್ಟವಾಗಿತ್ತು. ಭಾರತ ತಂಡದ ಕೋಚ್‌ ಇಗೊರ್‌ ಸ್ಟಿಮ್ಯಾಚ್‌ ಮತ್ತು ಆಟಗಾರರು ಪ್ರತಿಭಟಿಸಿದರೂ ರೆಫರಿ ತಮ್ಮ ನಿರ್ಧಾರ ಬದಲಿಸಲಿಲ್ಲ. 61ನೇ ನಿಮಿಷದಲ್ಲಿ ಕೊರ್ಬಿನ್‌ ಆಂಗ್‌ ಅವರು ಗೋಲು ಗಳಿಸಿ ಮಲೇಷ್ಯಾ ತಂಡದ ಗೆಲುವನ್ನು ಖಚಿತಪಡಿಸಿಕೊಂಡರು. ನಾಲ್ಕು ರಾಷ್ಟ್ರಗಳು ಪಾಲ್ಗೊಂಡಿದ್ದ ಟೂರ್ನಿಯಿಂದ ಪ್ಯಾಲೆಸ್ಟೀನ್‌ ಹಿಂದೆ ಸರಿದಿದೆ. ಅ.17 ರಂದು ನಡೆಯುವ ಫೈನಲ್‌ನಲ್ಲಿ ಮಲೇಷ್ಯಾ ಮತ್ತು ತಜಿಕಿಸ್ತಾನ ಎದುರಾಗಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.