ಕಿಂಗ್ಸ್‌ ಕಪ್‌: ಲೆಬನಾನ್‌ ವಿರುದ್ಧ ಭಾರತಕ್ಕೆ ಸೋಲು ಚಿಯಾಂಗ್‌ ಮೈ, ಥಾಯ್ಲೆಂಡ್‌ (ಪಿಟಿಐ): ಕಿಂಗ್ಸ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ತಂಡವು ಲೆಬನಾನ್‌ ತಂಡದ ವಿರುದ್ಧ 0–1ರಿಂದ ಸೋತು ನಿರಾಸೆ ಅನುಭವಿಸಿತು. ಭಾನುವಾರ ನಡೆದ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಯಾವುದೇ ತಂಡಕ್ಕೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. 77ನೇ ನಿಮಿಷದವರೆಗೂ ಉಭಯ ತಂಡಗಳು ಸಮಬಲದ ಪೈಪೋಟಿ ನಡೆಸಿದವು. ಈ ವೇಳೆ ಕಸ್ಸೆಮ್ ಇಲ್ ಝೀನ್ ‌ಅವರು ಬೈಸಿಕಲ್‌ ಕಿಕ್‌ ಮೂಲಕ ಚೆಂಡನ್ನು ಗುರಿ ಸೇರಿಸಿ ಲೆಬನಾನ್‌ ತಂಡಕ್ಕೆ ಜಯದ ಮುನ್ನುಡಿ ಬರೆದರು. ಟೂರ್ನಿಯಲ್ಲಿ ಲೆಬನಾನ್‌ ತಂಡ ಕಂಚಿನ ಪದಕ ಗಳಿಸಿತು. ಸುನಿಲ್‌ ಚೆಟ್ರಿ ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿದಿದ್ದ ಭಾರತ ತಂಡವು ಸೆಮಿಫೈನಲ್‌ ಪಂದ್ಯದಲ್ಲಿ ಇರಾಕ್‌ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ (4–5) ಸೋಲು ಅನುಭವಿಸಿತ್ತು. ಆತಿಥೇಯ ಥಾಯ್ಲೆಂಡ್‌ ಮತ್ತು ಇರಾಕ್‌ ನಡುವೆ ಫೈನಲ್‌ ಪಂದ್ಯ ನಡೆಯಲಿದೆ. ‌‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.