ಫುಟ್‌ಬಾಲ್‌: 16ರ ಘಟ್ಟಕ್ಕೆ ಭಾರತ ಹಾಂಗ್‌ಝೌ (ಪಿಟಿಐ): ನಾಯಕ ಸುನಿಲ್‌ ಚೆಟ್ರಿ ಅವರ ಗೋಲಿನ ನೆರವಿನಿಂದ ಮ್ಯಾನ್ಮಾರ್‌ ಜತೆ 1–1 ಗೋಲುಗಳ ಡ್ರಾ ಸಾಧಿಸಿದ ಭಾರತ ಪುರುಷರ ಫುಟ್‌ಬಾಲ್‌ ತಂಡ 16ರ ಘಟ್ಟಕ್ಕೆ ಪ್ರವೇಶಿಸಿತು. ಆದರೆ ಮಹಿಳಾ ತಂಡ ನಾಕೌಟ್‌ ಹಂತ ಪ್ರವೇಶಿಸಲು ವಿಫಲವಾಯಿತು. ಭಾನುವಾರ ನಡೆದ ಪಂದ್ಯದ 23ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಿಕ್‌ ಅವಕಾಶದಲ್ಲಿ ಗೋಲು ಗಳಿಸಿದ ಚೆಟ್ರಿ, ಮುನ್ನಡೆ ದೊರಕಿಸಿಕೊಟ್ಟರು. ರಹೀಂ ಅಲಿ ಅವರನ್ನು ಎದುರಾಳಿ ಆಟಗಾರ ಗೋಲು ಆವರಣದಲ್ಲಿ ಬೀಳಿಸಿದ್ದಕ್ಕೆ ಭಾರತಕ್ಕೆ ಪೆನಾಲ್ಟಿ ದೊರೆತಿತ್ತು. 74ನೇ ನಿಮಿಷದಲ್ಲಿ ಮ್ಯಾನ್ಮಾರ್‌ ಸಮಬಲದ ಗೋಲು ಗಳಿಸಿತು. ಕ್ವಾವ್ ಹಟ್ವೆ ಅವರು ಹೆಡ್‌ ಮಾಡಿದ ಚೆಂಡು, ಭಾರತದ ಗೋಲ್‌ಕೀಪರ್‌ ಧೀರಜ್‌ ಸಿಂಗ್‌ ಅವರನ್ನು ತಪ್ಪಿಸಿಕೊಂಡು ಗುರಿ ಸೇರಿತು. ಭಾರತ ಮತ್ತು ಮ್ಯಾನ್ಮಾರ್‌ ‘ಎ’ ಗುಂಪಿನಲ್ಲಿ ಸಮನಾದ ಪಾಯಿಂಟ್ಸ್‌ ಕಲೆಹಾಕಿದರೂ, ಮ್ಯಾನ್ಮಾರ್‌ಗಿಂತ ಹೆಚ್ಚು ಗೋಲುಗಳನ್ನು ಗಳಿಸಿದ್ದರಿಂದ ಚೆಟ್ರಿ ಬಳಗ ‘ರನ್ನರ್‌ ಅಪ್‌’ ಆಗಿ ಮುಂದಿನ ಸುತ್ತು ಪ್ರವೇಶಿಸಿತು. ಭಾರತ ತಂಡ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಬಲಿಷ್ಠ ಸೌದಿ ಅರೇಬಿಯಾ ತಂಡದ ಸವಾಲು ಎದುರಿಸಲಿದೆ. ಮಹಿಳೆಯರಿಗೆ ನಿರಾಸೆ: ವೆಂಗ್‌ಝೌನಲ್ಲಿ ನಡೆದ ಮಹಿಳೆಯರ ವಿಭಾಗದ ಪಂದ್ಯದಲ್ಲಿ ಭಾರತ 0–1 ಗೋಲಿನಿಂದ ಥಾಯ್ಲೆಂಡ್‌ಗೆ ತಲೆಬಾಗಿತು. 52ನೇ ನಿಮಿಷದಲ್ಲಿ ಗೋಲು ಗಳಿಸಿದ ಥಾಂಗ್‌ರೊಂಗ್ ಪರಿಚತ್‌ ಅವರು ಥಾಯ್ಲೆಂಡ್‌ ಗೆಲುವಿಗೆ ಕಾರಣರಾದರು. ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ 1–2 ರಿಂದ ಚೀನಾ ತೈಪೆ ಕೈಯಲ್ಲಿ ಸೋತಿತ್ತು. ಎರಡನೇ ಸೋಲು ಅನುಭವಿಸಿದ ಭಾರತ, ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಅವಕಾಶ ಕಳೆದುಕೊಂಡಿತು. ಐದು ಗುಂಪುಗಳಲ್ಲಿ ಅಗ್ರಸ್ಥಾನ ಪಡೆಯುವ ಐದು ತಂಡಗಳು ಮತ್ತು ಎರಡನೇ ಸ್ಥಾನ ಪಡೆದ ಅತ್ಯುತ್ತಮ ಮೂರು ತಂಡಗಳು ನಾಕೌಟ್‌ ಹಂತ ಪ್ರವೇಶಿಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.