ಫುಟ್‌ಬಾಲ್‌ ದಂತಕಥೆ ಡೇವಿಡ್ ಬೇಕಮ್‌ಗೆ ವಿಶೇಷ ಔತಣ ನೀಡಿದ ನಟ ಶಾರುಖ್‌ ಖಾನ್‌ ಮುಂಬೈ: ನಾಲ್ಕು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದ ಫುಟ್‌ಬಾಲ್‌ ದಂತಕಥೆ ಡೇವಿಡ್‌ ಬೇಕಮ್‌ ಅವರಿಗೆ ಬಾಲಿವುಡ್‌ ನಟ ಶಾರುಖ್ ಖಾನ್‌ ಅವರು ವಿಶೇಷ ಔತಣವನ್ನು ನೀಡಿದ್ದಾರೆ. ಆಟಗಾರ ಡೇವಿಡ್‌ ಬೇಕಮ್‌ ಅವರೊಂದಿಗಿನ ಫೋಟೊವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಶಾರುಖ್‌ ಖಾನ್‌ ಹಂಚಿಕೊಂಡಿದ್ದಾರೆ. ಫೋಟೊದಲ್ಲಿ ಶಾರುಖ್‌ ಖಾನ್‌ ಕ್ಯಾಶುಯಲ್‌ನಲ್ಲಿ ಕೂಲ್‌ ಆಗಿ ಕಾಣಿಸಿಕೊಂಡಿದ್ದು, ಬೇಕಮ್‌ ಕಪ್ಪು ಬಣ್ಣದ ಸೂಟ್‌ ಧರಿಸಿದ್ದಾರೆ. ಫೋಟೊದಲ್ಲಿ ಇಬ್ಬರು ಸಂತೋಷದಿಂದ ಪೋಸ್‌ ನೀಡುತ್ತಿರುವುದನ್ನು ಕಾಣಬಹುದಾಗಿದೆ. ‘ಕಳೆದ ರಾತ್ರಿ ಓರ್ವ ಐಕಾನ್ ಹಾಗೂ ‍ಪರಿಪೂರ್ಣ ಜಂಟಲ್‌ಮೆನ್‌ ಜತೆ ಇದ್ದೆ. ನಾನು ಯಾವಾಗಲೂ ಅವರ ದೊಡ್ಡ ಅಭಿಮಾನಿ. ಅವರು ಮಕ್ಕಳೊಂದಿಗೆ ಬೆರೆಯುವುದನ್ನು ನೋಡಿ, ಫುಟ್‌ಬಾಲ್‌ ಹೊರತಾಗಿಯೂ ಅವರ ಪ್ರೀತಿ ಹಾಗೂ ಸೌಮ್ಯ ಸ್ವಭಾವ ನನಗೆ ಅರಿವಾಯಿತು’ ಎಂದು ಬೇಕಮ್‌ ಕುರಿತು ಶಾರುಖ್‌ ತಮ್ಮ ಮೆಚ್ಚುಗೆಯನ್ನು ಪೋಸ್ಟ್‌ನಲ್ಲಿ ವ್ಯಕ್ತಪಡಿಸಿದ್ದಾರೆ. (@) ಶಾರುಖ್‌ ಖಾನ್‌ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬೇಕಮ್‌, ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶಾರುಖ್‌ ಅವರೊಂದಿಗಿನ ಫೋಟೊವನ್ನು ಹಂಚಿಕೊಂಡಿದ್ದು, ‘ಈ ಮಹಾನ್‌ ವ್ಯಕ್ತಿಯ ಮನೆಗೆ ನನ್ನನು ಸ್ವಾಗತಿಸಿರುವುದು ಉತ್ತಮ ಗೌರವವಾಗಿದೆ. ಶಾರುಖ್‌ ಖಾನ್‌, ಗೌರಿಖಾನ್‌ ಮತ್ತು ಅವರ ಸುಂದರ ಮಕ್ಕಳು ಹಾಗೂ ಆಪ್ತರೊಂದಿಗೆ ವಿಶೇಷ ಭೋಜನವನ್ನು ಆನಂದಿಸುವ ಮೂಲಕ ಭಾರತದ ನನ್ನ ಮೊದಲ ಭೇಟಿ ಕೊನೆಗೊಳ್ಳುತ್ತಿರುವುದು ತುಂಬಾ ವಿಶೇಷವಾಗಿದೆ. ಈ ಆತೀಥ್ಯಕ್ಕಾಗಿ ನನ್ನ ಸ್ನೇಹಿತನಿಗೆ (ಶಾರುಖ್‌ ಖಾನ್‌) ಧನ್ಯವಾದಗಳನ್ನು ತಿಳಿಸುತ್ತೇನೆ. ಹಾಗೆಯೇ, ನೀವು ಮತ್ತು ನಿಮ್ಮ ಕುಟುಂಬ ಯಾವಾಗಲಾದರೂ ನನ್ನ ಮನೆಗೆ ಬರಬಹುದಾಗಿದೆ’ ಎಂದು ಅವರು ಹೇಳಿದ್ದಾರೆ. (@) ಡೇವಿಡ್‌ ಬೇಕಮ್‌ ಯುನಿಸೆಫ್‌ನ ಸದ್ಭಾವನಾ ರಾಯಭಾರಿಯಾಗಿ ನಾಲ್ಕು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದರು. ಈ ವೇಳೆ 2023 ವಿಶ್ವಕಪ್‌ನ ಭಾರತ ಮತ್ತು ನ್ಯೂಜಿಲೆಂಡ್‌ನ ಸೆಮಿಫೈನಲ್‌ ಪಂದ್ಯವನ್ನು ವೀಕ್ಷಿಸಿದರು. ಇದರೊಂದಿಗೆ ಅಂಬಾನಿ ಅವರ ಮನೆ ಆಂಟಿಲಿಯಾಗೆ ಭೇಟಿ ನೀಡಿದರು. ಅಲ್ಲದೆ, ಸೋನಮ್‌ ಕಪೂರ್‌ ಮತ್ತು ಆನಂದ್‌ ಅಹುಜಾ ಅವರು ಆಯೋಜಿಸಿದ್ದ ಪಾರ್ಟಿಯಲ್ಲಿ ಬಾಲಿವುಡ್‌ ತಾರೆಗಳೊಂದಿಗೆ ಬೇಕಮ್‌ ಪಾಲ್ಗೊಂಡರು. (@) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.