ಮೆಸ್ಸಿ ಧರಿಸಿದ್ದ ಜೆರ್ಸಿ ಹರಾಜಿನಿಂದ ₹83 ಕೋಟಿ ನಿರೀಕ್ಷೆ ನ್ಯೂಯಾರ್ಕ್: ಫುಟ್‌ಬಾಲ್‌ ತಾರೆ ಲಯೊನೆಲ್ ಮೆಸ್ಸಿ ಅವರು 2022ರ ವಿಶ್ವಕಪ್‌ ಟೂರ್ನಿಯಲ್ಲಿ ಧರಿಸಿದ್ದ ಆರು ಜರ್ಸಿಗಳ ಸೆಟ್‌ ಡಿಸೆಂಬರ್‌ನಲ್ಲಿ ಹರಾಜಿಗೆ ಹೋಗಲಿದೆ ಎಂದು ಹರಾಜು ಸಂಸ್ಥೆ ಸೊದೆಬಿ ಸೋಮವಾರ ಪ್ರಕಟಿಸಿದೆ. ಹರಾಜಿನಲ್ಲಿ ಇವುಗಳ ಮೌಲ್ಯ ಸುಮಾರು ₹83.36 ಕೋಟಿ ಆಗಬಹುದೆಂದು ಅಂದಾಜು ಮಾಡಲಾಗಿದೆ. ಆರ್ಜೆಂಟೀನಾದ ಫಾರ್ವರ್ಡ್‌ ಮೆಸ್ಸಿ, ಈ ಶರ್ಟ್‌ಗಳನ್ನು ವಿಶ್ವಕಪ್‌ನ ಗುಂಪು ಪಂದ್ಯಗಳ ವೇಳೆ (ಸೌದಿ ಅರೇಬಿಯಾ, ಮೆಕ್ಸಿಕೊ) ಮತ್ತು ನಂತರ ನಾಕೌಟ್‌ ಪಂದ್ಯಗಳ ವೇಳೆ ಧರಿಸಿದ್ದರು. ಕತಾರ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಆರ್ಜೆಂಟೀನಾ ತಂಡ ಚಾಂಪಿಯನ್‌ ಆಗಿತ್ತು. ಒಂದು ವೇಳೆ ಹರಾಜಿನಲ್ಲಿ ಅಂದಾಜು ಮೌಲ್ಯದಷ್ಟು ಹಣ ಬಂದರೆ, ಇದುವರೆಗಿನ ಕ್ರೀಡಾ ಸ್ಮರಣಿಕೆಗಳ ಹರಾಜಿನಲ್ಲಿ ಅತ್ಯಧಿಕ ಮೊತ್ತ ಪಡೆದ ದಾಖಲೆ ಇದಾಗಲಿದೆ. ಕ್ರೀಡಾ ಸ್ಮರಣಿಕೆಗಳಿಗೆ ಮಾರುಕಟ್ಟೆ ಬೆಳೆಯುತ್ತಿದೆ. ಇದನ್ನು ಲಕ್ಷ್ಯದಲ್ಲಿಟ್ಟುಕೊಂಡು ಹರಾಜುಸಂಸ್ಥೆಗಳು ಇತ್ತೀಚಿನ ವರ್ಷಗಳಲ್ಲಿ ಕ್ರೀಡಾ ಸ್ಮರಣಿಕೆಗಳ ಹರಾಜಿನಲ್ಲಿ ತೊಡಗಿವೆ. ಮೆಸ್ಸಿ ಧರಿಸಿದ ಜೆರ್ಸಿಗಳ ಹರಾಜು ನವೆಂಬರ್ 30ರಿಂದ ಡಿಸೆಂಬರ್‌ 14ರವರೆಗೆ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.