ಐಎಸ್‌ಎಲ್‌: ಬಿಎಫ್‌ಸಿ– ಗೋವಾ ಮುಖಾಮುಖಿ ಬೆಂಗಳೂರು: ಬಿಎಫ್‌ಸಿ ತಂಡವು ಇಲ್ಲಿನ ಕಂಠೀರವ ಸ್ಟೇಡಿಯಂನಲ್ಲಿ ಬುಧವಾರ ಇಂಡಿಯನ್‌ ಸೂಪರ್‌ ಲೀಗ್‌ನ (ಐಎಸ್‌ಎಲ್‌) ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ. ಐಎಸ್‌ಎಲ್‌ನ 10ನೇ ಆವೃತ್ತಿಯಲ್ಲಿ ಬಿಎಫ್‌ಸಿ ತಂಡವು ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತರೆ, ಒಂದರಲ್ಲಿ ಗೆಲುವು ಸಾಧಿಸಿ ಪಾಯಿಂಟ್‌ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಕೇರಳ ಬ್ಲಾಸ್ಟರ್‌ ವಿರುದ್ಧ 1–2ರಿಂದ, ಮೋಹನ್‌ ಬಾಗನ್‌ ವಿರುದ್ಧ 0–1ರಿಂದ ಪರಾಭವಗೊಂಡಿದ್ದ ಬಿಎಫ್‌ಸಿ, ತವರಿನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಈಸ್ಟ್‌ ಬೆಂಗಾಲ್‌ ತಂಡವನ್ನು 2–1ರಿಂದ ಮಣಿಸಿತ್ತು. ಹೊಸ ಕೋಚ್ ಮನೊಲೊ ಮಾರ್ಕ್ವೆಜ್ ಅವರ ಮಾರ್ಗದರ್ಶನದಲ್ಲಿ ಗೋವಾ ತಂಡವು ಮೂರು ಪಂದ್ಯಗಳನ್ನೂ ಗೆದ್ದು ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಪಂಜಾಬ್‌ ಎಫ್‌ಸಿ ತಂಡವನ್ನು 1–0 ಯಿಂದ, ಒಡಿಶಾ 3–2 ರಿಂದ ಈಸ್ಟ್‌ ಬೆಂಗಾಲ್ ತಂಡವನ್ನು 2–1ರಿಂದ ಗೋವಾ ತಂಡ ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ‘ತವರಿನಲ್ಲಿ ಅಭಿಮಾನಿಗಳ ಬೆಂಬಲದೊಂದಿಗೆ ಬಿಎಫ್‌ಸಿ ತಂಡ ಉತ್ತಮ ಪ್ರದರ್ಶನ ಮುಂದುವರಿಸುವ ವಿಶ್ವಾಸವಿದೆ. ಮೆರ್ಡೆಕಾ ಕಪ್‌ಗಾಗಿ ರಾಷ್ಟ್ರೀಯ ತಂಡಕ್ಕೆ ಹೋಗಿದ್ದ ನಮ್ಮ ಆಟಗಾರರು ವಾಪಸಾಗಿದ್ದಾರೆ. ಅಲ್ಲದೆ, ಅಮಾನತಿನಲ್ಲಿದ್ದ ಸುರೇಶ್ ವಾಂಗ್‌ಜಮ್ ಮತ್ತು ನೌರೆಮ್ ರೋಶನ್ ಸಿಂಗ್ ತಂಡವನ್ನು ಸೇರಿಕೊಂಡಿದ್ದಾರೆ. ರೋಮಾಂಚಕಾರಿ ಆಟದ ನಿರೀಕ್ಷೆಯಲ್ಲಿದ್ದೇವೆ’ ಎಂದು ಬಿಎಫ್‌ಸಿ ತಂಡದ ಕೋಚ್‌ ಸೈಮನ್ ಗ್ರೇಸನ್ ಪ್ರತಿಕ್ರಿಯಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.